ಮಂಗಳೂರು, ಮೇ06: ಸಿಎಂ ಸಿದ್ದರಾಮಯ್ಯ ಅವರು ಮಾಡಿದ ಪಾಪಗಳ ಕೊಡ ತುಂಬಿದೆ. ಅವರ ಮಾಡಿದ ಪಾಪದ ಕೃತ್ಯಗಳಿಗೆ, ಮೇ 12ರಂದು ಶಿಕ್ಷೆ ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಶನಿವಾರ ಬಿಜೆಪಿ ಪ್ರಚಾರ ಸಮಾವೇಶದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಅಹಂಕಾರ ಕುಟುಂಬ ರಾಜಕೀಯ ನಡೆಯುದಿಲ್ಲ ಎಂಬುದನ್ನು ಕಾಂಗ್ರೆಸ್ ಕಂಡುಕೊಳ್ಳಬೇಕು. 400 ಕ್ಕೂ ಹೆಚ್ಚು ಸಂಸದರನ್ನು ಹೊಂದಿದ್ದ ಕಾಂಗ್ರೆಸ್ ತನ್ನ ಅಹಂಕಾರದಿಂದ ಒಂದೊಂದೇ ಕೋಟೆಯನ್ನು ಕಳೆದುಕೊಂಡು ನೀರಿಲ್ಲದ ಮೀನಿನಂತೆ ಪರಿತಪಿಸುತ್ತಿದೆ ಎಂದರು. ಕರ್ನಾಟಕದಲ್ಲಿ ಅತಂತ್ರ ಫಲಿತಾಂಶ ಬರುತ್ತದೆ ಎಂದು ಯಾರಿಗೂ ಸಂಶಯ ಬೇಡ, ಅದನ್ನು ಇಲ್ಲಿಯ ಜನ ಸಾಗರವೇ ಸಾರಿ ಹೇಳುತ್ತಿದೆ. ಇಲ್ಲಿ ಬಿಜೆಪಿಯ ಪೂರ್ಣ ಬಹುಮತದ ಸರಕಾರ ಬರುವುದು ಶತ ಸಿದ್ದ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರಾವಳಿಯ ಕರಣ್ ಆಚಾರ್ಯ ಅವರನ್ನು ಪ್ರಶಂಸಿದ ಅವರು, ಹನುಮಾನ್ ಚಿತ್ರ ಬಿಡಿಸಿರುವ ಕರಣ ಆಚಾರ್ಯ ಕರಾವಳಿಯ ಹೆಮ್ಮೆ. ಅವರ ಚಿತ್ರ ಇಡೀ ದೇಶದಲ್ಲಿ ಚರ್ಚೆಗೆ ಬಂದಿದೆ. ಕಾಂಗ್ರೆಸ್ಸಿಗರು ಈ ಚಿತ್ರವನ್ನು ವಿವಾದಕ್ಕೆ ಸಿಲುಕಿಸಿ ಅವಮಾನ ಮಾಡಿದರು ಎಂದು ಕಿಡಿಕಾರಿದರು.
ಮಂಗಳೂರಿನಲ್ಲಿ ಮೀನುಗಾರಿಕೆಗೆ ಅನುಕೂಲ ಕಲ್ಪಿಸಲು ಸಾಗರಮಾಲಾ ಯೋಜನೆ, ರಾಷ್ಟ್ರೀಯ ಹೆದ್ದಾರಿಯನ್ನು ಎಂಟು ಪಥವಾಗಿ ಅಭಿವೃದ್ದಿ, ನಾಲ್ಕು ಬಂದರುಗಳ ನಿರ್ಮಾಣ, ಆಳ ಸಮುದ್ರ ಮೀನುಗಾರಿಕೆ ಬೋಟು ಖರೀದಿಗೆ ಸಾಲ ಅದಕೆ ಬೆಳೆಗಾರರಿಗೆ ನ್ಯಾಯ ಒದಗಿಸುತ್ತೇನೆ ಎಂದರು.