ಉಡುಪಿ, ಸೆ.7(DaijiworldNews/HR): ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಕಾಡಿನಲ್ಲಿ ತುಂಬಿರುವ ಎರಡು ಸೆಣಬಿನ ಗೋಣಿ ಎಸೆದು ಹೋಗಿದ್ದು, ಇದನ್ನು ಸ್ಥಳೀಯರು ಕಂಡು ತೆರೆದು ನೋಡಿದಾಗ ಹಲವಾರು ಮಂಗಗಳ ಮೃತದೇಹಗಳು ಪತ್ತೆಯಾಗಿದೆ.

ಸಾಂಧರ್ಭಿಕ ಚಿತ್ರ
ಇನ್ನು ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ತೋಟಕ್ಕೆ ಬರುತ್ತದೆ ಎಂದು ಮಂಗಗಳಿಗೆ ವಿಷವಿಟ್ಟು ಕೊಂದಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಆಗುಂಬೆ ಘಾಟಿ ಪ್ರದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಂಗಗಳು ಕಾಣಿಸಿಕೊಳ್ಳುತ್ತವೆ. ಸುತ್ತಮುತ್ತ ತೋಟಗಳಿಗೆ ಮಂಗಗಳು ಬರುವುದು ಸಾಮಾನ್ಯ. ರೈತರಿಗೆ ಉಪಟಳ ಜಾಸ್ತಿಯಾದಾಗ ವಿಷವಿಟ್ಟು ಮಂಗಗಳನ್ನು ಕೊಂದಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಹಿಂದಿನ ವರ್ಷ ಕೂಡ ಅನೇಕ ಕೋತಿಗಳ ಮಾರಣಹೋಮ ನಡೆದಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ದುಷ್ಕೃತ್ಯ ಎಸಗಿ ನಾಡ್ಪಾಲು ಸಮೀಪ ಬಿಸಾಕಿ ಹೋಗಿದ್ದಾರೆ ಎನ್ನಲಾಗಿದೆ. ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.