ಮಂಗಳೂರು, ಸೆ 08 (DaijiworldNews/PY): ಕರಾವಳಿ ಜಿಲ್ಲೆಯಾದ್ಯಂತ ಚರ್ಚ್ಗಳಲ್ಲಿ ಇಂದು ಮೊಂತಿ ಫೆಸ್ಟ್ (ತೆನೆಹಬ್ಬ)ವನ್ನು ಭಕ್ತಿಯಿಂದ ಆಚರಿಸಲಾಗಿದ್ದು, ಕೊರೊನಾ ಕಾರಣದಿಂದ ಈ ಬಾರಿ ಸರಳ ಆಚರಣೆ ಮಾಡಲಾಯಿತು.
















ರೊಸಾರಿಯೋ ಕ್ಯಾಥೆಡ್ರಲ್, ಮಂಗಳೂರು























ಉಡುಪಿಯ ಮದರ್ ಆಫ್ ಸೊರೊಸ್ ಚರ್ಚ್
ಮೇರಿ ಮಾತೆಯ ಜಯಂತಿಯನ್ನು ಸೂಚಿಸುವ ಈ ಹಬ್ಬ ಒಂಭತ್ತು ದಿನಗಳ ನೋವೆನಾ ಪ್ರಾರ್ಥನೆಯ ಬಳಿಕ ಆಚರಿಸಲಾಗುತ್ತದೆ.
ಮಂಗಳೂರಿನ ಧರ್ಮ ಪ್ರಾಂತ್ಯದ ಬಿಷಪ್ ಅತಿ ವಂ.ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ರೊಸಾರಿಯೋ ಕ್ಯಾಥೆಡ್ರಲ್ನಲ್ಲಿ ಚರ್ಚ್ನಲ್ಲಿ ನೇತೃತ್ವ ವಹಿಸಿದ್ದರೆ, ಉಡುಪಿ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೋ ಅವರು ಮದರ್ ಆಫ್ ಸೊರೊಸ್ ಚರ್ಚ್ನಲ್ಲಿ ನೇತೃತ್ವ ವಹಿಸಿದ್ದರು.
ಕೊರೊನಾ ಹಿನ್ನೆಲೆ, ಈ ಬಾರಿ ಚರ್ಚ್ಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಯಿತು. ಚರ್ಚ್ನ ಒಳಗಡೆ ಕೆಲವು ಮಂದಿಗಷ್ಟೆ ಅವಕಾಶ ಕಲ್ಪಿಸಲಾಗಿತ್ತು. ಇದರೊಂದಿಗೆ ಮಾಸ್ಕ್ ಧರಿಸುವುದು ಕೂಡಾ ಕಡ್ಡಾಯವಾಗಿತ್ತು. ಪಾಲ್ಗೊಂಡ ಎಲ್ಲರನ್ನು ಥರ್ಮಲ್ ಸ್ಕ್ಯಾನರ್ನಿಂದ ತಪಾಸಣೆ ಮಾಡಲಾಯಿತು. ಇನ್ನು ಚರ್ಚ್ ಒಳಗಡೆ ಪ್ರವೇಶ ಮಾಡುವ ಮುನ್ನ ಸ್ಯಾನಿಟೈಸರ್ ನೀಡಲಾಗಿದ್ದು, 10 ವರ್ಷದೊಳಗಿನ ಹಾಗೂ 60ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಅನುಮತಿ ನೀಡಲಾಗಿಲ್ಲ.
ಈ ಬಾರಿಯ ತೆನೆ ಹಬ್ಬದಲ್ಲಿ ಮೆರವಣಿಗೆ ಹಾಗೂ ಮಕ್ಕಳಿಂದ ಹೂಗಳನ್ನು ಅರ್ಪಿಸುವಂತಹ ಕೆಲವು ಆಚರಣೆಗಳು ರದ್ದುಗೊಳಿಸಲಾಗಿತ್ತು. ಕೆಲವು ಮಂದಿಗಷ್ಟೆ ಮೇರಿ ಮಾತೆಗೆ ಹೂ ಅರ್ಪಿಸಲು ಅವಕಾಶ ನೀಡಲಾಯಿತು. ಚರ್ಚ್ನ ಒಳಗಡೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು.
ಈ ಹಬ್ಬವು ದ.ಕ ಹಾಗೂ ಉಡುಪಿ ಜಿಲ್ಲೆಗಳ ಕೊಂಕಣಿ ಕ್ಯಾಥೋಲಿಕರ ಧಾರ್ಮಿಕ ಹಬ್ಬವಾಗಿದ್ದು, ಸಾಂಸ್ಕೃತಿಕವಾಗಿ ಆಚರಣೆ ಆಚರಿಸುತ್ತಾರೆ. ಹಬ್ಬದ ದಿನದಂದು ಸ್ಥಳೀಯವಾಗಿ ಬೆಳೆದ ತರಕಾರಿಗಳಿಂದ ವಿವಿಧ ರೀತಿಯ ಅಡುಗೆ ಮಾಡಲಾಗುತ್ತದೆ. ಬಲಿಪೂಜೆಯ ಬಳಿಕ ಧರ್ಮಗುರುಗಳು ಪ್ರತೀ ಕುಟುಂಬಕ್ಕೆ ಆಶೀರ್ವದಿಸಿ ಹೊಸ ಭತ್ತದ ತೆನೆಗಳನ್ನು ನೀಡುತ್ತಾರೆ.
ಕರಾವಳಿ ಜಿಲ್ಲೆಗಳ ಚರ್ಚ್ಗಳಲ್ಲಿ ಐದು ತಿಂಗಳ ಬಳಿಕ ಈ ಹಬ್ಬದ ಆಚರಣೆಗಾಗಿ ಚರ್ಚ್ಗಳನ್ನು ತೆರೆಯಲಾಗಿದ್ದು, ಇನ್ನು ಮಾರ್ಗಸೂಚಿಗಳ ಪ್ರಕಾರ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಭಾನುವಾರದಂದು ಸಾಮೂಹಿಕ ಪ್ರಾರ್ಥನೆ ನಡೆಯಲಿದೆ.