ಕಾಸರಗೋಡು, ಸೆ. 08 (DaijiworldNews/MB) : ಒಂದೇ ಕುಟುಂಬದ ಮೂವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಇಂದು ಮಧ್ಯಾಹ್ನ ನಗರ ಹೊರ ವಲಯದ ಚೆಂಗಳ ತೈವಳಪ್ಪು ಎಂಬಲ್ಲಿ ಬೆಳಕಿಗೆ ಬಂದಿದೆ.

ಚೆಂಗಳದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ತಿರುವನಂತಪುರದ ಮೂಲದ ಮಿದ್ ಲಾಜ್ ( 55) , ಪತ್ನಿ ಕಾಸರಗೋಡು ಪೊವ್ವಲ್ ಮಾಸ್ತಿಕುಂಡುವಿನ ಸಾಜಿದಾ ( 33) ಹಾಗೂ ಪುತ್ರ ಫಹಾದ್ (13) ಮೃತಪಟ್ಟವರು.
ಮನೆಯ ಕೊಠಡಿಯಲ್ಲಿ ಮೂರು ಮೃತದೇಹಗಳು ಪತ್ತೆಯಾಗಿವೆ. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಮಿದ್ ಲಾಜ್ ಹೊಲಿಗೆ ವೃತ್ತಿಯನ್ನು ನಡೆಸುತ್ತಿದ್ದರು.
ಇಂದು ಮಧ್ಯಾಹ್ನ ತನಕ ಬಾಗಿಲು ತೆರೆಯದೆ ಇದ್ದುದರಿಂದ ಪರಿಸರವಾಸಿಗಳು ಕಿಟಿಕಿ ಮೂಲಕ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ವಿದ್ಯಾನಗರ ಠಾಣಾ ಪೊಲೀಸರು ಬಾಗಿಲು ಒಡೆದು ಒಳ ತೆರಳಿದಾಗ ಮೂವರು ಮೃತಪಟ್ಟಿರುವುದು ಕಂಡು ಬಂದಿದೆ.
ವಿಷ ಸೇವನೆಗೆ ಬಳಸಿದ್ದೆನ್ನಲಾದ ಒಂದು ಗ್ಲಾಸ್ ಮೃತದೇಹಗಳ ಸಮೀಪ ಪತ್ತೆಯಾಗಿದೆ. ಮಹಜರು ನಡೆಸಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆರ್ಥಿಕ ಮುಗ್ಗಟ್ಟಿನಿಂದ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ.