ಮಂಗಳೂರು, ಸೆ. 08 (DaijiworldNews/MB) : ಸಂಪ್ರದಾಯಗಳಿಗೆ ಜನಪ್ರಿಯವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಧರ್ಮದ ಜನರು ತಮ್ಮದೇ ಆದ ಸಾಂಸ್ಕೃತಿಕ ಹಬ್ಬಗಳನ್ನು ಆಚರಿಸುತ್ತಾರೆ. ಪ್ರಕೃತ್ತಿಯನ್ನು ಗೌರವಿಸುವ ಹಬ್ಬವಾದ ತೆನೆ ಹಬ್ಬವನ್ನು ಹಿಂದೂ ಮತ್ತು ಕ್ರೈಸ್ತ ಸಮುದಾಯದವರು ವಿಷೇಶವಾಗಿ ಆಚರಿಸುತ್ತಾ ಬರುತ್ತಿದ್ದಾರೆ. ಕ್ರೈಸ್ತರು ತೆನೆಹಬ್ಬವನ್ನು ಮೋಂತಿ ಹಬ್ಬವಾಗಿ ಆಚರಿಸಿದರೆ ಹಿಂದೂ ಧರ್ಮೀಯರು ಗಣೇಶ ಚತುರ್ಥಿಯಂದು ಹಿಂದೂ ದೇವಸ್ಥಾನಗಳಲ್ಲಿ ಪ್ರಸಾದ ರೂಪದಲ್ಲಿ ತೆನೆಯನ್ನು ಸಂಗ್ರಹಿಸಿ ತೆನೆಯನ್ನು ದೇವರ ಮುಂದೆ ಪೂಜೆ ಮಾಡಿ ಮನೆಮಂದಿಯೆಲ್ಲ ಒಟ್ಟಾಗಿ ಕುಳಿತು ಹೊಸ ಅಕ್ಕಿ ಊಟ ಮಾಡುವುದು ವಾಡಿಕೆಯಾಗಿದೆ. ಈ ಎರಡು ಧರ್ಮದ ಹಬ್ಬಗಳ ಸಂದರ್ಭದಲ್ಲಿ ಹಿಂದೂ ದೇವಸ್ಥಾನ ಹಾಗೂ ಚರ್ಚುಗಳಿಗೆ ತಾವು ಬೆಳೆದ ಪೈರನ್ನು ಉಚಿತವಾಗಿ ಪೂರೈಸುವ ಮೂಲಕ ಜಪ್ಪಿನ ಮೊಗರು ಕಡೆಕಾರು ನಿವಾಸಿ ಹರ್ಬರ್ಟ್ ಡಿ ಸೋಜಾರವರು ಸೌಹಾರ್ದತೆಯನ್ನು ಎತ್ತಿ ಹಿಡಿದಿದ್ದಾರೆ.



ಹೌದು, ಹರ್ಬರ್ಟ್ ಡಿ ಸೋಜಾರವರು ಹಲವಾರು ವರ್ಷಗಳಿಂದ ತಮ್ಮ ಗದ್ದೆಯಲ್ಲಿ ತೆನೆ ಹಬ್ಬಕ್ಕೆಂದೇ ವಿಶೇಷವಾಗಿ ಪೈರುಗಳನ್ನು ಬೆಳೆಸುತ್ತಿದ್ದಾರೆ. ಮಂಗಳೂರಿನ ಹಲವು ದೇವಾಲಯ ಹಾಗೂ ಚರ್ಚುಗಳಿಗೆ ಮೋಂತಿ ಹಬ್ಬ ಹಾಗೂ ಗಣೇಶ ಚತುರ್ಥಿಯಂದು ತೆನೆಯನ್ನು ಹರ್ಬರ್ಟ್ ಡಿ ಸೋಜಾರವರು ಹಲವಾರು ವರ್ಷಗಳಿಂದ ಪೂರೈಸುತ್ತಿದ್ದಾರೆ.
ಇನ್ನು ಈ ಗದ್ದೆಯಲ್ಲಿ ಬೆಳೆಯುವ ಪೈರು ಕೇವಲ ದೈವಿಕ ಕೆಲಸಕ್ಕಾಗಿ ಮಾತ್ರ ಉಪಯೋಗಿಸಲಾಗುತ್ತಿರುವ ಕಾರಣದಿಂದಾಗಿ ಹೊಲಕ್ಕೆ ಯಾವುದೇ ಪ್ರಾಣಿ ಅಥವಾ ಮನುಷ್ಯರ ಪ್ರವೇಶಕ್ಕೆ ಅನುವು ಮಾಡಿಕೊಡದೆ ಗದ್ದೆಯ ಸುತ್ತಲೂ ಬೇಲಿ ಹಾಕಿ ನೈಸರ್ಗಿಕ ಹಾಗೂ ಪರಿಶುದ್ಧವಾಗಿ ಬೆಳೆಸುತ್ತಿದ್ದಾರೆ.
ಧರ್ಮದ ವಿಚಾರದಲ್ಲಿ ಹೊಡೆದಾಡುತ್ತಿರುವ ಈ ಸಂದರ್ಭದಲ್ಲಿ ಜಾತ್ಯಾತೀತ ಮನೋಭಾವನೆಯಿಂದ ಎಲ್ಲಾ ಧರ್ಮದವರಿಗೂ ತೆನೆ ಪೈರನ್ನು ದಾನ ಮಾಡುತ್ತಿರುವ ಹರ್ಬರ್ಟ್ ಡಿ ಸೋಜಾರವರ ಸೌಹಾರ್ದ ಮನೋಭಾವಕ್ಕೆ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.