ಮಂಗಳೂರು, ಮೇ: ಕರ್ನಾಟಕದಲ್ಲಿ ಬಿಜೆಪಿ ಪಕ್ಷವು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದೆ ಎಂದು, ಎಐಸಿಸಿ ವಕ್ತಾರ ರಣ್ ದೀಪ್ ಸಿಂಗ್ ಸುರ್ಜೀವಾಲ್ ಹೇಳಿದ್ದಾರೆ. ಮೇ 06 ರಂದು ನಗರದಲ್ಲಿ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, 2014 ರ ಚುನಾವಣೆಯಲ್ಲಿ, ಮೋದಿ ಮಂಗಳೂರಿಗೆ ಬಂದಿದ್ದಾಗ ಹಲವಾರು ಚುನಾವಣೆ ಸಂದರ್ಭ ರಾಜ್ಯಕ್ಕೆ ಭೇಟಿ ನೀಡಿ ಸಾಕಷ್ಟು ಆಶ್ವಾಸನೆ ನೀಡುವ ಮೋದಿ ಬಳಿಕ ಅದನ್ನು ಮರೆತು ಬಿಡುತ್ತಾರೆ. ಅಲ್ಲದೆ ರಾಜ್ಯ ಸರಕಾರ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ರೀತಿಯಲ್ಲೂ ಸ್ಪಂದಿಸುತ್ತಿಲ್ಲ. ಆದರೆ, ರಾಜ್ಯಕ್ಕೆ ಕೇಂದ್ರವು ನಿರೀಕ್ಷಿತ ಅನುದಾನವನ್ನು ಬಿಡುಗಡೆ ಮಾಡಿಲ್ಲ ಎಂದು ಅಂಕಿ ಅಂಶ ಸಹಿತ ತಿಳಿಸಿದರು.
ಕಳೆದ ಚುನಾವಣೆ ಸಂದರ್ಭ ಹರ್ ಹರ್ ಮೋದಿ... ಘರ್... ಘರ್... ಮೋದಿ ಎಂಬ ಘೋಷಣೆ ಹೆಚ್ಚಾಗಿ ಕೇಳಿ ಬರುತ್ತಿತ್ತು.ಆದರೆ 2019 ರ ಚುನಾವಣೆಯಲ್ಲಿ ಅದರ ಬದಲಾಗಿ ಬೈ ಬೈ ಮೋದಿ ಎಂಬ ಮಾತು ಕೇಳಿ ಬರಲಿದೆ ಎಂದು ರಣದೀಪ್ ಸಿಂಗ್ ಸುರ್ಜಿವಾಲ ಹೇಳಿದರು. ಇದೇ ವೇಳೆ ಯಡ್ಡಿ ಮತ್ತು ರೆಡ್ಡಿ ಗ್ಯಾಂಗ್ ಸೇರಿಕೊಂಡು ರಾಜ್ಯವನ್ನು ಲೂಟಿ ಮಾಡಿದೆ ಎಂದು ರಣ್ ದೀಪ್ ಸಿಂಗ್ ಸುರ್ಜೀವಾಲ್ ಹೇಳಿದ್ದಾರೆ.
ಇದೇ ವೇಳೆ ಮಹಾರಾಷ್ಟ್ರದ ಮಾಜಿ ಸಚಿವ ಸುರೇಶ್ ಶೆಟ್ಟಿ, ಎಐಸಿಸಿ ಮಾಧ್ಯಮ ವಕ್ತಾರ ಜೈವೀರ್ ಶೆರ್ಗಿಲ್, ಮಂಜುನಾಥ ಭಂಡಾರಿ, ಸಂಜೀವ್ ಸಿಂಗ್ ಮುಂತಾದವರು ಉಪಸ್ಥಿತರಿದ್ದರು.