ಉಡುಪಿ, ಸೆ. 08 (DaijiworldNews/MB) : ಡ್ರಗ್ಸ್ ವಿಚಾರದಲ್ಲಿ ನಮ್ಮದು ಜೀರೋ ಟಾಲರೆನ್ಸ್. ಡ್ರಗ್ಸ್ ಮುಕ್ತ ಕರ್ನಾಟಕವೇ ನಮ್ಮ ಗುರಿ ಎಂದು ಡಿಜಿಪಿ ಪ್ರವೀಣ್ ಸೂದ್ ಅವರು ಹೇಳಿದ್ದಾರೆ.



ಉಡುಪಿ ಎಸ್ಪಿ ಕಚೇರಿಯಲ್ಲಿ ಸಭೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು,ಡ್ರಗ್ಸ್ ನಿಯಂತ್ರಣದ ಬಗ್ಗೆ ಚರ್ಚೆ ಮಾಡಿದ್ದು ಬೆಂಗಳೂರಲ್ಲಿ ಕಳೆದ ಹತ್ತು ದಿನಗಳಿಂದ ಅನೇಕ ಪ್ರಕರಣ ಬೆಳಕಿಗೆ ಬಂದಿದೆ. ನಮ್ಮ ಕಾರ್ಯಚರಣೆ ಕೇವಲ ಬೆಂಗಳೂರಿಗೆ ಸೀಮಿತವಾಗಿಲ್ಲ. ಬೆಳಗಾಂ ಹುಬ್ಬಳ್ಳಿ ಚಿತ್ರದುರ್ಗ ಕರಾವಳಿ ಭಾಗದಲ್ಲೂ ಕಾರ್ಯಚರಣೆ ನಡೆಸಿದ್ದೇವೆ.ಈಗ ಆಗಿರುವ ಕಾರ್ಯಾಚರಣೆಗಳಿಂದ ನಮಗೆ ಸಮಾಧಾನವಿಲ್ಲ. ಸಾಫ್ಟ್ ಡ್ರಗ್ಸ್, ನ್ಯಾಚುರಲ್ ಡ್ರಗ್ಸ್, ಗಾಂಜಾ, ಸಿಂಥೆಟಿಕ್ ಡ್ರಗ್ಸ್ ಎಲ್ಲವನ್ನೂ ನಿಯಂತ್ರಣ ಮಾಡುವ ಗುರಿ ಹೊಂದಿದ್ದೇವೆ. ಚಾಕಲೇಟ್ ಡ್ರಿಂಕ್ಸ್ಗಳಲ್ಲೂ ಡ್ರಗ್ಸ್ ಬೆರೆಸುತ್ತಾರೆ. ಇವೆಲ್ಲದರ ಬಗ್ಗೆ ಕ್ರಮ ತೆಗೆದುಕೊಳ್ಳಲು ಐಜಿ- ಎಸ್ಪಿಗೆ ಸೂಚಿಸಿದ್ದು ರಿಸಲ್ಟ್ ತೋರಿಸುವ ಜವಾಬ್ದಾರಿ ಅವರ ಮೇಲಿದೆ. ಡ್ರಗ್ಸ್ ದಂಧೆಯನ್ನು ಸಮುದ್ರಮಾರ್ಗ, ಆಕಾಶಮಾರ್ಗ, ಭೂ ಮಾರ್ಗ ಹೀಗೆ ಯಾವ ಮಾರ್ಗದಲ್ಲೂ ನಡೆಸಿದರೂ ಮಟ್ಟ ಹಾಕುತ್ತೇವೆ. ಸೋಮವಾರ ಮುಖ್ಯಮಂತ್ರಿ ಸಭೆ ನಡೆಸಿ ಸೂಚನೆ ನೀಡಿದ್ದಾರೆ ಎಂದು ಹೇಳಿದರು.
ಹಾಗೆಯೇ ಕಾರ್ಯಚರಣೆ ಕೇವಲ ಬೆಂಗಳೂರಿಗೆ ಸೀಮಿತವಾಗಿಲ್ಲ. ಬೇರೆ ಕಡೆಯಲ್ಲೂ ನಡೆಯುತ್ತಿದೆ ಆದರೆ ಅದು ಸುದ್ದಿಯಾಗುತ್ತಿಲ್ಲ ಎಂದು ತಿಳಿಸಿದರು.
ಸೆಲೆಬ್ರಿಟಿಗಳ ಬಂಧನ ಇತ್ಯಾದಿ ವಿಚಾರಗಳ ಬಗ್ಗೆ ಬೆಂಗಳೂರು ಕಮಿಷನರ್ ಮಾತಾನಾಡುತ್ತಾರೆ. ಆದರೆ ತನಿಖೆ ನಡೆಯುತ್ತಿರುವಾಗ ಪೊಲೀಸ್ ಅಧಿಕಾರಿಯಾಗಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದ ಅವರು, ರಾಜ್ಯ ಸರ್ಕಾರ ಮುಕ್ತ ಅವಕಾಶ ನೀಡಿದೆ. ಅಷ್ಟು ಮಾತ್ರವಲ್ಲ ಕಠಿಣ ಸೂಚನೆಯನ್ನು ನೀಡಿದ್ದಾರೆ. ರಾಜ್ಯವನ್ನು ಡ್ರಕ್ಸ್ ಮುಕ್ತ ಮಾಡುವ ಸೂಚನೆ ನೀಡಿದ್ದು ಅದು ನಮ್ಮ ಗುರಿ ಎಂದು ತಿಳಿಸಿದ್ದಾರೆ.
ಇನ್ನು ಬೆಂಗಳೂರು-ಮಂಗಳೂರು ದೊಡ್ಡ ಡ್ರಕ್ಸ್ ಹಬ್ ಆಗಿದೆ ಎಂದು ಕೂಡಾ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಕೊರೊನಾ ಕಾರಣದಿಂದಾಗಿ ತಂತ್ರಜ್ಞಾನ ಬಳಕೆಯನ್ನು ಕಲಿತಿದ್ದು ಇನ್ನು ಅಧಿಕ ಬಳಸಬೇಕಾಗಿದೆ. ಈಗಾಗಲೇ ೨೦ ಕ್ಕೂ ಅಧಿಕ ವಿಡಿಯೋ ಕಾನ್ಫರೆನ್ಸ್ ನಡೆಸಲಾಗಿದೆ. ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ನಿಟ್ಟಿನಲ್ಲಿ ಆನ್ಲೈನ್ ತಂತ್ರಜ್ಞಾನವನ್ನು ಅಧಿಕವಾಗಿ ಬಳಸಬೇಕು ಎಂದು ಅಭಿಪ್ರಾಯ ಪಟ್ಟರು.
ಇನ್ನು ಸಹಾಯವಾಣಿ 112 ಅನ್ನು ಸಕ್ರಿಯಗೊಳಿಸಬೇಕಾಗಿದೆ. ತೊಂದರೆಗೊಳಗಾದ ಮಹಿಳೆಯರಿಗೆ ನೆನಪಿನಲ್ಲಿಡಲು ಸಾಧ್ಯವಾಗುವ ಒಂದು ಅಂಕೆಯ ಸಹಾಯವಾಣಿಯ ಅಗತ್ಯವಿದೆ ಎಂದು ಹೇಳಿದರು.
ಕಳೆದ ಮಾರ್ಚ್ನಿಂದ ಪ್ರತಿ ಜಿಲ್ಲೆಗೆ ಭೇಟಿ ನೀಡುವ ಯೋಚನೆಯಿದ್ದು ಆದರೆ ಕೊರೊನಾ ಕಾರಣದಿಂದಾಗಿ ಸಾಧ್ಯವಾಗಿಲ್ಲ. ಕಳೆದೆರಡು ತಿಂಗಳಿಂದ ಜಿಲ್ಲೆಗಳ ಭೇಟಿ ಆರಂಭಿಸಿದ್ದು 18 ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದೇನೆ ಎಂದು ಹೇಳಿದ ಅವರು, ಉಡುಪಿಯಲ್ಲಿ ಕೊರೊನಾ ಸಂದರ್ಭದಲ್ಲಿ ಕಾನ್ಸ್ಟೇಬಲ್ನಿಂದ ಹಿಡಿದು ಎಸ್ಪಿವರೆಗೂ ಎಲ್ಲರೂ ಕೆಲಸ ಮಾಡಿದ್ದಾರೆ. ಪೊಲೀಸರು ಸುರಕ್ಷಿತರಾಗಿದ್ದರೆ ಎಲ್ಲರೂ ಸುರಕ್ಷಿತರಾಗಿರುತ್ತಾರೆ ಎಂದು ಹೇಳಿದರು.