ಬೈಂದೂರು, ಸೆ 09 (DaijiworldNews/PY): ಬೈಂದೂರು ತಾಲೂಕು ಘೋಷಣೆಯಾದ ಸಂದರ್ಭದಲ್ಲಿ ಮೂಲಭೂತ ಸೌಲಭ್ಯಗಳ ಸಮಸ್ಯೆ ಕಾಡುತ್ತಿತ್ತು. ಹಂತ ಹಂತವಾಗಿ ಅಭಿವೃದ್ದಿ ಪಡಿಸುವ ಕಾರ್ಯ ನಡೆಯುತ್ತಿದೆ. ಕೊಲ್ಲೂರಿನಿಂದ ಕೊಡಚಾದ್ರಿಗೆ 11 ಕಿ.ಮೀ ಕೇಬಲ್ ಕಾರು ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ಉದ್ಯೋಗವಕಾಶಗಳ ಸೃಷ್ಟಿ, ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ. 75 ಕೋಟಿ ವೆಚ್ಚದ ಸೌಕೂರು ಏತ ನೀರಾವರಿ ಯೋಜನೆ ಚಾಲನೆಗೊಂಡಿದೆ. ಸಿದ್ಧಾಪುರ ಏತ ನೀರಾವರಿ ಯೋಜನೆಯನ್ನು ಅದಷ್ಟು ಬೇಗ ಆರಂಭಿಸಲಾಗುವುದು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಹೇಳಿದರು.









ಅವರು ಸೌಕೂರಿನಲ್ಲಿ ವಾರಾಹಿ ಇಲಾಖೆಯಿಂದ ಮಂಜೂರಾದ 2 ಕೋಟಿ ರೂ.ಮೊತ್ತದ ಸೌಕೂರು ದೇವಸ್ಥಾನದ ಸುತ್ತಮುತ್ತಲ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನಡೆಸಿ, ದೇವಸ್ಥಾನದ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಷೇತ್ರದ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಮಾತನಾಡಿ, ಸೌಕೂರು ಏತ ನೀರಾವರಿ ಯೋಜನೆಗೆ ಅನುದಾನ ಬಿಡುಗಡೆಯಾಗಿದೆ. ಸೌಕೂರು ಕುದ್ರುವಲ್ಲಿ 1 ಕೋಟಿ ರೂ.ಮೊತ್ತದಲ್ಲಿ ರಸ್ತೆ ಕಾಮಗಾರಿಗಳು ನಡೆದಿವೆ. ಗುಲ್ವಾಡಿ ಗ್ರಾಮ ಪಂಚಾಯತಿಗೂ ಸಾಕಷ್ಟು ಅನುದಾನ ಬಂದಿದೆ. ಗುಲ್ವಾಡಿ ಕುದ್ರುವಲ್ಲಿ 550 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ಸಂಸದರು ಅನುದಾನ ಬಿಡುಗಡೆ ಮಾಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಬೈಂದೂರು ಮಂಡಲದ ಅಧ್ಯಕ್ಷ ದೀಪಕ ಕುಮಾರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಪೂಜಾರಿ ಜೆಡ್ಡು, ಬಾಲಚಂದ್ರ ಭಟ್, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ರಾಜಪ್ಪ, ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ ರವಿ, ಸೌಕೂರು ದೇವಸ್ಥಾನದ ಮುಖ್ಯಸ್ಥರು, ಅರ್ಚಕವೃಂದವರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ರಘುರಾಮ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಅನಂತ ಅಡಿಗ ವಂದಿಸಿದರು. ಭೂಮಿ ಪೂಜೆಗೂ ಮೊದಲು ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.