ಬಂಟ್ವಾಳ, ಸೆ 09 (DaijiworldNews/PY): ಮನೆಯೊಂದರಲ್ಲಿ ಗಾಂಜಾ ದಾಸ್ತಾನು ಮಾಡುತ್ತಿದ್ದ ಮಾಹಿತಿ ತಿಳಿದ ಬಂಟ್ವಾಳ ನಗರ ಪೊಲೀಸ್ ಠಾಣಾ ಉಪನಿರೀಕ್ಷಕರು ತಮ್ಮ ಠಾಣಾ ಸಿಬ್ಬಂದಿಗಳೊಂದಿಗೆ ನಡೆಸಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.


ಬಂಧಿತ ಆರೋಪಿಯನ್ನು ಬಂಟ್ವಾಳ ಮೂಡ ಗ್ರಾಮದ ನಿವಾಸಿ ಅಹಮ್ಮದ್ ಸಾಬೀತ್ (30) ಎಂದು ಗುರುತಿಸಲಾಗಿದೆ. ಈ ವೇಳೆ ಮತ್ತೋರ್ವ ಆರೋಪಿ ಮಹಮ್ಮದ್ ಅನ್ಸಾರ್ ಎಂಬಾತ ಪರಾರಿಯಾಗಿದ್ದಾನೆ.
ದಾಳಿ ನಡೆಸಿದ್ದ ಸಂದರ್ಭ ಮನೆಯಲ್ಲಿ ಮಾದಕ ಗಾಂಜ ಗಿಡದ ಮೊಗ್ಗು, ಎಲೆ , ಕಡ್ಡಿಗಳು ಇದ್ದು ಅವು ಅರೆ ಒಣಗಿದ್ದಅವುಗಳನ್ನುಎರಡು ಪಾಲಿಥೀನ್ ಚೀಲಗಳಲ್ಲಿ ತುಂಬಿಸಲಾಗಿತ್ತು. ಬಂಧಿತರಿಂದ ಒಟ್ಟು 39 ಕೆ ಜಿ 948 ಗ್ರಾಂ ತೂಕದ ಸುಮಾರು 19,97,400 ರೂ ಮೌಲ್ಯದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇನ್ನೊಂದು ಪ್ರಕರಣದಲ್ಲಿ, ಆಟೋರಿಕ್ಷಾವೊಂದರಲ್ಲಿ ಅಕ್ರಮವಾಗಿ ಗಾಂಜಾ ವ್ಯವಹಾರ ಮಾಡುತ್ತಿದ್ದ ವ್ಯಕ್ತಿಯನ್ನು ಡಿ.ಸಿ.ಐ.ಬಿ ವಿಭಾಗದ ಪೊಲೀಸ್ ನಿರೀಕ್ಷಕರು ಬಂಧಿಸಿದ್ದಾರೆ.
ಆರೋಪಿಯನ್ನು ಕಾಸರಗೋಡು ತಾಲೂಕಿನ ಪಾಡಿ ಗ್ರಾಮದ ಚೇರ್ಕಳ ನಿವಾಸಿ ಮುಹಮ್ಮದ್ ಅಸ್ತು ಅಲಿಯಾಸ್ ಮುಹಮ್ಮದ್ ಅಲಿ (28) ಎಂದು ತಿಳಿದುಬಂದಿದೆ.
ಸೆ.8ರ ಮಂಗಳವಾರದಂದು 3.35ರ ಸುಮಾರಿಗೆ ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಬೆಂಜಂತಿಮಾರ್ ಕ್ರಾಸ್ ಬಳಿ ಅಟೋರಿಕ್ಷಾ ವಾಹನದಲ್ಲಿ ಅಕ್ರಮವಾಗಿ ಗಾಂಜಾ ವ್ಯವಹಾರವನ್ನು ನಡೆಸುತ್ತಿದ್ದ ವ್ಯಕ್ತಿಯನ್ನು ಡಿ.ಸಿ.ಐ.ಬಿ ವಿಭಾಗದ ಪೊಲೀಸ್ ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ತೆರಳಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಬಂಧಿತ ಆರೋಪಿಯಿಂದ ಒಟ್ಟು 880 ಗ್ರಾಂ ಗಾಂಜಾ, ಒಂದು ಆಟೋ ರಿಕ್ಷಾ, ಮೊಬೈಲ್ ಹಾಗೂ 150 ರೂ ಸೇರಿದಂತೆ ಒಟ್ಟು 98,550 ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆಯ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.