ಮಂಗಳೂರು, ಮೇ 07: ಕರಾವಳಿಯ ಕಲಾವಿದನೊಬ್ಬ ರಚಿಸಿದ ಹನುಮನ ಚಿತ್ರ ಇದೀಗ ಸೂಪರ್ ಹಿಟ್ ಆಗಿದ್ದು, ಈ ಪ್ರತಿಭೆಯನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ.
ಮಂಗಳೂರಿನ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ನರೇಂದ್ರ ಮೋದಿ, ಕರಣ್ ಆಚಾರ್ಯ ಅವರು ತಮ್ಮ ಕಲಾಕೃತಿಯಿಂದ ದೇಶದ ಮೆಚ್ಚುಗೆ ಗಳಿಸಿದ್ದಾರೆ. ಅವರ ಪ್ರತಿಭೆ ಮತ್ತು ಕ್ರಿಯಾಶೀಲತೆಗೆ ನನ್ನ ವಂದನೆಗಳು ಎಂದು ಪ್ರಶಂಸಿದ್ದಾರೆ.
ಕೇರಳದ ಕಾಸರಗೋಡು ಮೂಲದ ಕರಣ್ ಆಚಾರ್ಯ ಉಗ್ರರೂಪಿ ಹನುಮಚಿತ್ರದ ಚಿತ್ರದ ಮೂಲ ಜನಕ. ಕರಾವಳಿಯ ಹುಡುಗನಾದ ಕಿರಣ್ ಹುಟ್ಟಿದ್ದು ಗಡಿನಾಡಾದ ಕಾಸರಗೋಡಿನಲ್ಲಿ. ದಯಾನಂದ ಆಚಾರ್ಯ ಮತ್ತು ಮಂಜುಳಾ ದಂಪತಿಗಳ ಪುತ್ರನಾದ ಈತ ಹುಟ್ಟು ಕಲಾವಿದ. ತಾಯಿಯೇ ಮೊದಲ ಕಲಾ ಗುರು ಎನ್ನುವ ಕರಣ್, ಈ ಅರ್ಧ ಮುಖದ ಹನುಮಂತ ಚಿತ್ರ ಜನರಲ್ಲಿ ಇಷ್ಟೊಂದು ಕ್ರೇಜ್ ಹುಟ್ಟಿಸಬಹುದೆಂಬುದನ್ನು ಕನಸು ಮನಸಿನಲ್ಲಿಯೂ ಊಹಿಸಿಕೊಂಡಿರಲಿಲ್ಲ.
ಆದರೆ, ಇದೀಗ ಸ್ವತಃ ಮೋದಿಯೇ ಈ ಚಿತ್ರಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದು, ಕರಣ್ ಅವರ ಕಲಾ ಚಾತುರ್ಯವನ್ನು ಹಾಡಿ ಹೊಗಳಿದ್ದಾರೆ. ಕಾರ್ ವಿಂಡ್ ಶೀಲ್ಡ್ ಮೇಲೆ, ಬೈಕುಗಳ ಹಿಂದೆ-ಮುಂದೆ, ಮೊಬೈಲ್ ವಾಲ್ಪೇಪರ್ ಆಗಿ, ಟಿ ಶರ್ಟ್ ಮೇಲೆ, ವಾಟ್ಸಾಪ್ ಡಿಪಿಯಾಗಿ ಕಡು ಕೆಂಪು ಕಣ್ಣಿನ ಉಗ್ರ ರೂಪಿ ಹನುಮನ ಚಿತ್ರ ರಾರಾಜಿಸುತ್ತಿದೆ.