ಕಾಸರಗೋಡು, ಸೆ. 09 (DaijiworldNews/MB) : ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಹಾಗೂ ಶರತ್ ಲಾಲ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಸ್ ಡೈರಿಯನ್ನು ಸಿಬಿಐಗೆ ಹಸ್ತಾಂತರಿಸದಿರುವುದನ್ನು ಪ್ರತಿಭಟಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಕ್ರೈಂ ಬ್ರಾಂಚ್ ಕಚೇರಿಗೆ ಇಂದು ನಡೆಸಿದ ಜಾಥಾ ಹಿಂಸಾರೂಪಕ್ಕೆ ತಿರುಗಿದ್ದು, ಡಿವೈಎಸ್ಪಿ ಸೇರಿದಂತೆ ಏಳು ಪೊಲೀಸರು ಹಾಗೂ ಹತ್ತಕ್ಕೂ ಅಧಿಕ ಯುವ ಕಾಂಗ್ರೆಸ್ ಕಾರ್ಯಕರ್ತರು ಗಾಯಗೊಂಡಿದ್ದಾರೆ.


















ವಿದ್ಯಾನಗರದಿಂದ ಮೆರವಣಿಗೆ ಮೂಲಕ ತೆರಳಿದ ಕಾರ್ಯಕರ್ತರು ಪೊಲೀಸರ ಬ್ಯಾರಿಕೇಡ್ ಗಳನ್ನು ತೆಗೆದು ನುಗ್ಗಲೆತ್ನಿಸಿದ್ದು , ಈ ಸಂದರ್ಭದಲ್ಲಿ ಪೊಲೀಸರು ಜಲಫಿರಂಗಿ ಪ್ರಯೋಗಿಸಿದರು . ಐದಕ್ಕೂ ಹೆಚ್ಚು ಬಾರಿ ಜಲಫಿರಂಗಿ ಬಳಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಅಶ್ರುವಾಯು ಪ್ರಯೋಗಿಸಿದರು.
ಆದರೂ ಕಾರ್ಯಕರ್ತರು ಬಗ್ಗದೆ ಪೊಲೀಸರತ್ತ ಕಲ್ಲೆಸೆದಿದ್ದು ಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗುತ್ತಿದಂತೆ ಪೊಲೀಸರು ಲಾಠಿ ಪ್ರಹಾರ ನಡೆಸಿದದ್ದು, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ರ ಮೇಲೆ ಲಾಠಿಯಿಂದ ಥಳಿಸಿದರು. ಲಾಠಿ ಚಾರ್ಜ್ ನಿಂದ ಹಲವು ಕಾರ್ಯಕರ್ತರು ಗಾಯಗೊಂಡರು. ಕಲ್ಲೆಸೆತದಿಂದ ಡಿ ವೈ ಎಸ್ ಪಿ ಬಾಲಕೃಷ್ಣನ್ ನಾಯರ್ ಸೇರಿದಂತೆ 7 ಪೊಲೀಸರು ಗಾಯಗೊಂಡಿದ್ದಾರೆ. ಪೊಲೀಸ್ ಸಿಬಂದಿಗಳಾದ ಸುಜಿತ್ ,ರಂಜಿತ್, ನವೀನ್, ಶಿವಪ್ರಸಾದ್, ಡಿ . ಥಾಮಸ್, ಪ್ರಕಾಶ್ ಗಾಯಗೊಂಡಿದ್ದಾರೆ.
ಕೊಲೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಹೈಕೋರ್ಟ್ ಆದೇಶ ನೀಡಿದ್ದರೂ ಕ್ರೈಂ ಬ್ರಾಂಚ್ ಪ್ರಕರಣದ ಇದುವರೆಗಿನ ವಿಚಾರಣೆ ಹೊಂದಿರುವ ಕೇಸ್ ಡೈರಿಯನ್ನು ನೀಡಲು ಮುಂದಾಗಿಲ್ಲ ದಿರುವುದನ್ನು ಪ್ರತಿಭಟಿಸಿ ಯುವ ಕಾಂಗ್ರೆಸ್ ಪ್ರತಿಭಟನೆ ಆಯೋಜಿಸಿತ್ತು.
ಪ್ರತಿಭಟನೆಯನ್ನು ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ರಿಜಿನ್ ಮಾಕುಟ್ಟಿ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಬಿ. ಪಿ ಪ್ರದೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡರಾದ ಪಿ ಕೆ ಫೈಝಲ್, ಪಿ.ವಿ ಸುರೇಶ್, ಬಾಲಕೃಷ್ಣ ಪೆರಿಯ ಮೊದಲಾದವರು ಉಪಸ್ಥಿತರಿದ್ದರು