ಕಾರ್ಕಳ, ಸೆ. 09 (DaijiworldNews/MB) : ದನ ಸಾಗಾಟದ ಆರೋಪದಲ್ಲಿ ಯುವಕನೊಬ್ಬನಿಗೆ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಈದು ಗುಮ್ಮೆಟ್ಟು ಎಂಬಲ್ಲಿ ನಡೆದಿದೆ.

ಸೆ. 8ರ ರಾತ್ರಿ ಸುಮಾರು 7 ಗಂಟೆಗೆ ಸುಜಯ್ ದೇವಾಡಿಗ(30) ಎಂಬವರು ಬೈಕ್ನಲ್ಲಿ ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ತಂಡವೊಂದು ದಾರಿಗೆ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಯೋಗೀಶ್ ಅಲಿಯಾಸ್ ಮುನ್ನಾ, ರವಿ ಆಚಾರ್ಯ ಅಲಿಯಾಸ್ ಅಭಿ, ನಿತಿನ್ ಹಾಗೂ ಇತರ 17 ಮಂದಿ ಪ್ರಕರಣದ ಆರೋಪಿತರೆಂದು ತಿಳಿದುಬಂದಿದೆ.
ಗಾಯಾಳು ಸುಜಯ್ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಪ್ರಕರಣದ ಹಿನ್ನಲೆ
ಜು.22ರಂದು ಈದು ಗ್ರಾಮದ ಜಂಗೊಟ್ಟು ಕಾಲನಿಯ ಸೀತಾರಾಮ ಮಲೆಕುಡಿಯ ಹೈನುಗಾರಿಕೆಗೆಂದು ಬಾಬು ಪೂಜಾರಿಯವರಿಂದ ಹಸುವೊಂದನ್ನು ಖರೀದಿಸಿದ್ದರು. ಬಾಬು ಪೂಜಾರಿ ಹಾಗೂ ಸುಜಯ್ ದೇವಾಡಿಗ ಅವರಿಬ್ಬರು ಹಸುವನ್ನು ಸೀತಾರಾಮ ಮಲೆಕುಡಿಯವರ ಹಟ್ಟಿಗೆ ತಂದು ಕಟ್ಟಿ ಹಾಕಿದ್ದರು.
ಅದೇ ದಿನ ಸಂಜೆಅಬ್ದುಲ್ ರಹ್ಮಾನ್ ಆಡು ಖರೀದಿಸಲೆಂದು ಅದೇ ಪರಿಸರಕ್ಕೆ ಬಂದಿದ್ದಾಗ ತಂಡವೊಂದು ಅವರ ಕಾರನ್ನು ಅಡ್ಡಗಟ್ಟಿ ಧ್ವಂಸ ಗೊಳಿಸಿದ್ದರು. ಮಾತ್ರವಲ್ಲದೇ ಸೀತಾರಾಮ ಮಲೆಕುಡಿಯ ಅವರ ಮನೆಗೂ ನುಗ್ಗಿ ಸೀತಾರಾಮ ಅವರನ್ನು ಹಲ್ಲೆ ನಡೆಸಿರುವ ಕುರಿತು ಆರೋಪಗಳು ಕೇಳಿಬಂದಿದ್ದವು. ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದುವರಿದ ಭಾಗವಾಗಿ ಸುಜಯ್ ಮೇಲೆ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ.