ಕಾಸರಗೋಡು, ಸೆ. 09 (DaijiworldNews/MB) : ಕೇರಳದ ಪ್ರಥಮ ಟಾಟಾ ಕೋವಿಡ್ ಆಸ್ಪತ್ರೆ ಬುಧವಾರ ಲೋಕಾರ್ಪಣೆಗೊಂಡಿತು. ಚಟ್ಟಂಚಾಲ್ನಲ್ಲಿ ಟಾಟಾ ಸಮೂಹ ಸಂಸ್ಥೆ ನಿರ್ಮಿಸಿರುವ ಕೊರೋನಾ ಆಸ್ಪತ್ರೆಯ ಹಸ್ತಾಂತರ ಪ್ರಕ್ರಿಯೆಯನ್ನು ವೀಡಿಯೋ ಕಾನ್ಫೆರೆನ್ಸ್ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದರು.







ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಯವರು, ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವ ನಾಡಿನ ಅಭಿವೃದ್ಧಿಗೆ ಪೂರಕಾವಾದುದು ಎಂದು ಅಭಿಪ್ರಾಯಪಟ್ಟರು.
ಕೊರೋನಾದ ಆರಂಭದ ದಿನಗಳಲ್ಲಿ ಸೋಂಕು ನಿಯಂತ್ರಣಕ್ಕೆ ಟಾಟಾ ಸಂಸ್ಥೆಯು 500 ಕೋಟಿ ರೂ. ನೀಡಲು ಮುಂದಾಗಿತ್ತು. ಈ ಬಗ್ಗೆ ಸಂಸ್ಥೆಯ ಪ್ರತಿನಿಧಿಗಳನ್ನು ಭೇಟಿ ಮಾಡಿ ಆಸ್ಪತ್ರೆ ನಿರ್ಮಾಣಕ್ಕೆ ಆಸಕ್ತಿ ತೋರಲಾಯಿತು. ಆರೋಗ್ಯ ವಲಯದಲ್ಲಿ ಹಿಂದುಳಿದಿರುವ ಕಾಸರಗೋಡಿನಲ್ಲಿ ಆಸ್ಪತ್ರೆ ನಿರ್ಮಿಸಬೇಕೆಂಬ ಬೇಡಿಕೆಯನ್ನು ಟಾಟಾ ಸಂಸ್ಥೆ ಅಂಗೀಕರಿಸಿತು. ಅಗತ್ಯವಾದ ಐದು ಎಕರೆ ಸ್ಥಳ ಹಾಗೂ ಸೌಲಭ್ಯವನ್ನು ಒದಗಿಸಲಾಯಿತು. ಅತೀ ಶೀಘ್ರದಲ್ಲಿ ಆಸ್ಪತ್ರೆ ನಿರ್ಮಿಸುವ ಮೂಲಕ ಬಹು ನಿರೀಕ್ಷಿತ ಯೋಜನೆಯನ್ನು ಪೂರ್ಣಗೊಳಿಸಿರುವುದು ಪ್ರಶಂಶನೀಯ ಎಂದು ಹೇಳಿದರು.
ಕೊರೊನಾದ ಆರಂಭಿಕ ದಿನಗಳಲ್ಲಿ ಚಿಕಿತ್ಸೆಗೆ ಕಾಸರಗೋಡು ಜನರಲ್ ಆಸ್ಪತ್ರೆ ಮಾದರಿಯಾಗಿದೆ. ಇದಲ್ಲದೆ ಉಕ್ಕಿನಡ್ಕದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಾಸರಗೋಡು ವೈದ್ಯಕೀಯ ಕಾಲೇಜು ನಾಲ್ಕು ದಿನಗಳಲ್ಲಿ ಕೊರೊನಾ ಆಸ್ಪತ್ರೆಯನ್ನಾಗಿ ಸಜ್ಜುಗೊಳಿಸಲಾಯಿತು. 200 ಮಂದಿಗೆ ಚಿಕಿತ್ಸಾ ಸೌಲಭ್ಯ ಕಲ್ಪಿಸಲಾಗಿತ್ತು. ಈ ಆಸ್ಪತ್ರೆಗಾಗಿ 273 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಹೇಳಿದರು.
ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಮುಖ್ಯ ಅತಿಥಿಯಾಗಿದ್ದರು. ಟಾಟಾ ಯೋಜನೆ ನಿಗಮದ ಡಿ.ಜಿ.ಎಂ.ಗೋಪಿನಾಥ್ ರೆಡ್ಡಿ ಅವರು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಆಸ್ಪತ್ರೆಯ ಕೀಲಿಕೈ ಹಸ್ತಾಂತರಿಸಿದರು.