ಉಡುಪಿ, ಸೆ. 09 (DaijiworldNews/MB) : ಕೊರೊನಾ ನಡುವೆಯೂ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಈ ಬಾರಿ ನಿರ್ಬಂಧಿತ ಕ್ರಮಗಳನ್ನು ಕೈಗೊಂಡು ಹೆಚ್ಚು ಆಡಂಬರವಿಲ್ಲದೆ ಸೆಪ್ಟೆಂಬರ್ 10 ರಂದು ಅಷ್ಟಮಿ, ಅರ್ಘ್ಯಪ್ರದಾನ ಮತ್ತು 11 ರಂದು ವಿಟ್ಲಪಿಂಡಿ ಕೃಷ್ಣ ಜನ್ಮಾಷ್ಟಮಿ ಆಚರಿಸಲು ಸಿದ್ಧತೆ ಭರದಿಂದ ಸಾಗುತ್ತಿದೆ.





























ಕಲಾವಿದರ ಕೈಯಿಂದ ಮೊಸರು ಕುಡಿಕೆಯ ಮೇಲೆ ಸುಂದರವಾದ ಚಿತ್ರಗಳನ್ನು ಬರೆಯಲಾಗಿದ್ದು ಅಂತಿಮ ಹಂತದ ಸಿದ್ದತೆ ಮಠದಲ್ಲಿ ನಡೆಯುತ್ತಿದೆ. ಎಂದಿನಂತೆ ಕೃಷ್ಣ ಮಠದ ಒಳಗೆ ಕೃಷ್ಣನ ಗರ್ಭಗುಡಿಯಲ್ಲಿ ಎಲ್ಲಾ ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಆದರೆ ವಿಟ್ಲಪಿಂಡಿಯಂದು ಮಠದವರೇ ಸೇರಿ ಎಲ್ಲಾ ಸೇವೆಗಳನ್ನು ನಡೆಸುತ್ತಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಮಠದ ಒಳಗೆ ಮತ್ತು ರಥಬೀದಿಯಲ್ಲಿ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಮಠಕ್ಕೆ ಬರುವ ಎಲ್ಲಾ ಪ್ರವೇಶ ದ್ವಾರಗಳನ್ನು ಮುಚ್ಚಿ ಪೋಲೀಸ್ ಬಂದೋಬಸ್ತ್ ಮಾಡಲಾಗುತ್ತದೆ.
ಅಲ್ಲದೆ ಈ ಬಾರಿ ಯಾವುದೇ ಮನರಂಜನಾ ಸ್ಪರ್ಧೆಗಳನ್ನು ನಡೆಸಿಲ್ಲ. ಕೆಲವು ಸಂಘ ಸಂಸ್ಥೆಗಳು ಆನ್ ಲೈನ್ ಮೂಲಕ ಅಷ್ಟಮಿ ಪ್ರಯುಕ್ತ ಸ್ವರ್ಧೆಗಳನ್ನು ನಡಿಸಿವೆ. ಅರುಲು, ಗುಂಡಿತ್ತು, ಎಳ್ಳು ಮತ್ತು ಕಡಲೆ ಈ ನಾಲ್ಕು ಬಗೆಯ ಲಾಡು ಈ ದಿನದಂದು ವಿಶೇಷವಾಗಿ ತಯಾರಿಸಲಾಗುತ್ತದೆ. ಪ್ರತಿ ವರ್ಷದಂತೆ ಬಗೆ ಬಗೆಯ ಲಾಡು ಚಕ್ಕುಲಿಗಳನ್ನು ಭಕ್ತರಿಗಾಗಿ ತಯಾರು ಮಾಡಲಾಗುತ್ತಿದೆ.
ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ಸ್ವಾಮಿಗಳು, ರಾತ್ರಿ 12:16 ಗಂಟೆಗೆ ಆರ್ಘ್ಯ ಪ್ರಾಧಾನದ ಧಾರ್ಮಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಕಾರ್ ಸ್ಟ್ರೀಟ್ ಸುತ್ತ ಗೊಲ್ಲರು ಮಡಕೆ ಒಡಯುವಲ್ಲಿ 12 ಮರದ ಗುರ್ಜಿಗಳು ಮತ್ತು 2 ಮಂಟಪವನ್ನು ನಿರ್ಮಿಸಲಾಗಿದೆ, ಇದರ ಕೆಳಗೆ ಶ್ರೀ ಕೃಷ್ಣನ ಚಿನ್ನದ ರಥವನ್ನು ಚಲಿಸಲಾಗುತ್ತದೆ. ಈ ಮರದ ಗೋಪುರಾಗಳಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನೂ ಇಡಲಾಗುತ್ತದೆ. ಸಾಂಪ್ರದಾಯಿಕ ವೇಷಭೂಷಣವನ್ನು ಧರಿಸಿ ಈ ಮಡಿಕೆಗಳನ್ನು ಒಬ್ಬರಮೇಲೆ ಒಬ್ಬರು ಹತ್ತಿ ಕೋಲಿನಿಂದ ಒಡೆಯಬೇಕು. ಈ ಮೊಸರು ಕುಡಿಕೆ ಸಂಪ್ರದಾಯ ಕಳೆದ 80 ವರ್ಷಗಳಿಂದ ನಡದು ಬರುತ್ತಿದೆ.
ಮರುದಿನ ಬೆಳಗ್ಗೆ ದಾರ್ಮಿಕ ಪೂಜಾ ವಿಧಾನಗಳು ನಡೆಯುತ್ತವೆ. ಎರಡನೇ ದಿನ ಮಧ್ಯಾಹ್ನ ಶ್ರೀ ಕೃಷ್ಣ ಲೀಲೋತ್ಸವ ನಡೆಯುತ್ತವೆ. ಅಲಂಕೃತ ಗೊಂಡ ಚಿನ್ನದ ರಥದಲ್ಲಿ ಕೃಷ್ಣನ ಮೃತ್ತಿಕಾ ಮೂರ್ತಿ ಕುಳ್ಳಿರಿಸಿ ರಥಬೀದಿಯ ಸುತ್ತ ಒಂದು ಪ್ರದಕ್ಷಿಣೆ ಬಂದು ಕೊನೆಗೆ ಪರ್ಯಾಯ ಸ್ವಾಮೀಜಿಯವರಿಂದಲೇ ಮದ್ವ ಸರೋವರದಲ್ಲಿ ವಿಸರ್ಜನೆ ಮಾಡುತ್ತಾರೆ. ಇಲ್ಲಿಗೆ ಎರಡು ದಿನದ ಕೃಷ್ಣ ಜನ್ಮ ಲೀಲೋತ್ಸವ ಸಂಪನ್ನ ಗೊಳ್ಳಲಿದೆ. ಈ ಬಾರಿಯ ವಿಶೇಷವೇನೆಂದರೆ ಪ್ರಥಮ ಬಾರಿಗೆ ಪರ್ಯಾಯ ರೋಹಣ ಮಾಡಿರುವ ಅದಮಾರು ಶ್ರೀ ಈಶಪ್ರಿಯ ತೀರ್ಥರು, ಹಿರಿಯ ಅದಮಾರು ಶ್ರೀ ವಿಶ್ವಪ್ರಿಯರ ಮಾರ್ಗದರ್ಶನದಲ್ಲಿ ನಡೆಯಲಿದೆ.
ಕೊರೊನಾ ಕಂಟಕದಿಂದ ಎಲ್ಲರ ಹಿತದೃಷ್ಟಿಯಿಂದ ಭಕ್ತರ ಆಗಮನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಅನ್ನಸಂತರ್ಪಣೆ ಯನ್ನ ಮೊಟಕು ಗೊಳಿಸಲಾಗಿದೆ. ಪ್ರತಿ ವರ್ಷ ವಿಟ್ಲಪಿಂಡಿಯಂದು ಎಲ್ಲರ ಮನ ರಂಜಿಸುತಿದ್ದ ಹುಲಿವೇಷಧಾರಿಗಳಿಗೂ ಕೂಡಾ ಈ ಬಾರಿ ಕೊರೊನಾ ಕಾರಣದಿಂದ ಅವಕಾಶ ಇಲ್ಲವಾಗಿದೆ.
ಈ ಜನ್ಮಾಷ್ಟಮಿಯ ಸಂಭ್ರಮವನ್ನು ಆನ್ ಲೈನ್ ಮುಖಾಂತರ ನೋಡುವಂತೆ ಮಠದ ಆಡಳಿತ ಮಂಡಳಿ ವ್ಯವಸ್ಥೆಯನ್ನು ಮಾಡಿದ್ದಾರೆ.