ಉಳ್ಳಾಲ, ಸೆ. 09 (DaijiworldNews/MB) : ಕಳೆದ ಒಂದು ತಿಂಗಳಿನಿಂದ ಖಾಲಿಯಾಗಿದ್ದ ಉಳ್ಳಾಲ ಠಾಣೆಯ ಇನ್ಸ್ ಪೆಕ್ಟರ್ ಹುದ್ದೆಗೆ ಕರಾವಳಿ ಕಾವಲು ಪಡೆಯ ಗಂಗೊಳ್ಳಿ ವಲಯದಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ಸಂದೀಪ್ ಜಿ.ಎಸ್ ಬುಧವಾರ ಅಧಿಕಾರ ಸ್ವೀಕರಿಸಿದರು.

ಅನಿಲ್ ಕುಮಾರ್ ಅವರು ವರ್ಗಾವಣೆ ಬಳಿಕ ಉಳ್ಳಾಲ ಠಾಣೆಯ ಚಾರ್ಜ್ ಮಂಗಳೂರು ಗ್ರಾಮಾಂತರ ಠಾಣೆಯ ಅಶೋಕ್ ಅವರಿಗೆ ವಹಿಸಲಾಗಿತ್ತು. ಒಂದು ತಿಂಗಳಿನಿಂದ ಉಳ್ಳಾಲ ಠಾಣೆಯಲ್ಲಿ ಆರು ಮಂದಿ ಎಸ್.ಐ ಗಳು ಕಾರ್ಯಚರಿಸುತ್ತಿದ್ದರೂ, ಇನ್ಸ್ಪೆಕ್ಟರ್ ಹುದ್ದೆ ಖಾಲಿಯಾಗಿತ್ತು. ಇದೀಗ ಅಧಿಕಾರ ಸ್ವೀಕರಿಸಿದ ಸಂದೀಪ್ ಜಿ.ಎಸ್ ಅವರು ಕರಾವಳಿ ಕಾವಲು ಪಡೆ ಗಂಗೊಳ್ಳಿ ವಲಯದಲ್ಲಿ ಒಂದು ವರ್ಷದಿಂದ ಇನ್ಸ್ ಪೆಕ್ಟರ್ ಆಗಿ ಕಾರ್ಯಚರಿಸುತ್ತಿದ್ದರು. 2007ನೇ ಬ್ಯಾಚ್ ನವರಾಗಿರುವ ಇವರು ಮೈಸೂರಿನಲ್ಲಿ ತರಬೇತಿ ಪಡೆದು, ದಾರವಾಡದಲ್ಲಿ ಪ್ರೊಬೆಷನರಿ ಎಸ್.ಐ ಆಗಿ ಇಲಾಖೆಯಲ್ಲಿ ಸೇವೆಯನ್ನು ಆರಂಭಿಸಿದ್ದರು.
ಹುಬ್ಬಳ್ಳಿ ನಗರ, ಶಿವಮೊಗ್ಗ, ಭದ್ರಾವತಿ, ಹೊಸನಗರ, ಕುಮ್ಸಿ, ಹಾವೇರಿ ಹಿರೇಕರೂರು ಜಿಲ್ಲೆಗಳಲ್ಲಿ ಎಸ್.ಐ ಆಗಿ ಸೇವೆ ಸಲ್ಲಿಸಿದ್ದರು. ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಯ ಸೇವಾ ಅವಧಿಯಲ್ಲಿ ಕಳವು ಹಾಗೂ ಅಪರಾಧ ಪ್ರಕರಣ ಬೇಧಿಸಿದ ಹಿನ್ನೆಲೆಯಲ್ಲಿ ಎಸ್.ಪಿ ಅವರಿಂದ ಪ್ರಶಂಸಾ ಪತ್ರವನ್ನು ಪಡೆದುಕೊಂಡಿದ್ದರು.
ನಾಲ್ಕು ಎಸ್.ಐ ಗಳು: ಕೋವಿಡ್ -19 ನಿಬಂಧನೆಗಳು ಆರಂಭವಾದ ದಿನದಿಂದ ಉಳ್ಳಾಲ ಠಾಣೆಯಲ್ಲಿ ಆರು ಮಂದಿ ಎಸ್.ಐ ಗಳು ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ಇಬ್ಬರು ಎಸ್.ಐಗಳ ವರ್ಗಾವಣೆ ಆಗಿದೆ. ಇದೀಗ ವಿನಾಯಕ್ ತೋರಗಲ್, ಪ್ರದೀಪ್ ,ಶಿವ ಕುಮಾರ್, ರೇವಣ್ಣ ಸಿದ್ದಪ್ಪ ಉಳ್ಳಾಲ ಠಾಣೆಯ ಎಸ್.ಐ ಗಳಾಗಿದ್ದಾರೆ.