Karavali
ಬೈಂದೂರು: ಅಂಗಡಿ ತೆರವಿಗೆ ವಿರೋಧ- ವ್ಯಾಪಾರಿಗಳಿಂದ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡುವ ಬೆದರಿಕೆ
- Mon, May 07 2018 01:25:29 PM
-
ಬೈಂದೂರು ಮೇ 07: ತ್ರಾಸಿ-ಮರವಂತೆ ಕಡಲ ತೀರದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿರುವ ಸುಮಾರು 28 ಗೂಡಂಗಡಿಗಳ ತೆರವಿಗೆ ಕುಂದಾಪುರ ಉಪವಿಭಾಗಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಮುಂದಾಗಿದ್ದು, ಕಾರ್ಯಾಚರಣೆ ವಿರೋಧಿಸಿ ಅಂಗಡಿ ಮಾಲೀಕರು ಸಮುದ್ರಕ್ಕೆ ಹಾರಿ ಆತ್ಯಹತ್ಯೆಗೆ ಮುಂದಾದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.
ತ್ರಾಸಿ-ಮರವಂತೆ ಕಡಲ ತೀರದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಬದಿಯಲ್ಲಿರುವ ಗೂಡಂಗಡಿಗಳನ್ನು ತೆರವುಗೊಳಿಸುವಂತೆ ಶನಿವಾರ ಸಂಜೆ ನೋಟಿಸು ನೀಡಲಾಗಿದ್ದು, ಯಾರೊಬ್ಬರು ಅಂಗಡಿ ತೆರವು ಮಾಡದಿರುವುದರಿಂದ ಸೋಮವಾರ ಬೆಳಿಗ್ಗೆ ಜೆಸಿಬಿ ಮೂಲಕ ಅಂಗಡಿ ತೆರವುಗೊಳಿಸಲು ಪೊಲೀಸ್ ಬಿಗು ಭದ್ರತೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಮುಂದಾದರು. ಇದನ್ನು ವಿರೋಧಿಸಿದ ಅಂಗಡಿ ಮಾಲೀಕರು ಹಾಗೂ ಸ್ಥಳೀಯರು ಗೂಡಂಗಡಿ ತೆರವು ಕಾರ್ಯದ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಹಲವರು ಅಂಗಡಿ ಮತ್ತು ಜೆಸಿಬಿ ಮುಂದೆ ಮಲಗಿ ಕಾರ್ಯಾಚರಣೆಗೆ ಅಡ್ಡಿಪಡಿಸಿದರು. ಕಾರ್ಯಾಚರಣೆ ಕ್ರಮವನ್ನು ಖಂಡಿಸಿ ಸ್ಥಳೀಯರು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಕಾರ್ಯಾಚರಣೆಗೆ ಅಡ್ಡಿಪಡಿಸಲು ಆರಂಭಿಸಿದ ಸ್ಥಳೀಯರನ್ನು ಪೊಲೀಸರು ಚದುರಿಸಿದರು. ಆದರೂ ಗೂಡಂಗಡಿ ತೆರವಿಗೆ ಮುಂದಾದ ಅಧಿಕಾರಿಗಳ ವಿರುದ್ಧ ಸಿಟ್ಟು ಕಡಿಮೆಯಾಗಲಿಲ್ಲ. ತೆರವು ಕಾರ್ಯಾಚರಣೆಗೆ ಸ್ಥಳೀಯರು ಸತತವಾಗಿ ಅಡ್ಡಿಪಡಿಸಲಾರಂಭಿಸಿದರು.
ಸ್ಥಳೀಯರ ವಿರೋಧವನ್ನು ಲೆಕ್ಕಿಸದೆ ಗೂಡಂಗಡಿ ತೆರವಿಗೆ ಮುಂದಾಗುತ್ತಿದ್ದಂತೆಯೇ ಕೆಲವರು ಸಮುದ್ರಕ್ಕೆ ಹಾರಿ ಆತ್ಯಹತ್ಯೆ ಮಾಡಿಕೊಳ್ಳಲು ಮುಂದಾದರು. ಸೋಮವಾರ ಸಂಜೆಯೊಳಗೆ ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ತೆರವುಗೊಳಿಸಬೇಕು ಅಲ್ಲಿಯತನಕ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಲಾಗುವುದು ಎಂದು ಕುಂದಾಪುರ ಉಪವಿಭಾಗಾಧಿಕಾರಿ ಭೂಬಾಲನ್ ಭರವಸೆ ನೀಡಿದ ಬಳಿಕ ಆತ್ಮಹತ್ಯೆ ಮಾಡಲು ಹೋದವರೆಲ್ಲರೂ ಮರಳಿ ಬಂದರು. ಗೂಡಂಗಡಿ ತೆರವು ಮಾಡುವ ಕ್ರಮಕ್ಕೆ ನಮ್ಮ ಯಾವುದೇ ವಿರೋಧ ಇಲ್ಲ. ಆದರೆ ಏಕಾಏಕಿ ಒಂದು ದಿನ ಸಮಯಾವಕಾಶ ನೀಡಿ ಅಂಗಡಿ ತೆರವಿ ಮಾಡಿ ಎಂದು ಹೇಳಿದರೆ ನಾವೇನು ಮಾಡುವುದು. ಇದನ್ನೇ ನಂಬಿ ಜೀವನ ನಡೆಸುತ್ತಿರುವ ನಾವೆಲ್ಲರೂ ಬೀದಿಪಾಲಾಗುತ್ತೇವೆ. ಕನಿಷ್ಠ ೧೫ ದಿನ ಸಮಯಾವಕಾಶ ನೀಡಿ ಎಂದು ಗೂಡಂಗಡಿ ಮಾಲೀಕರು ಉಪವಿಭಾಗಾಧಿಕಾರಿಗಳಲ್ಲಿ ಮನವಿ ಮಾಡಿದರು.
ಗೂಡಂಗಡಿ ಮಾಲೀಕರ ಬೇಡಿಕೆಯನ್ನು ತಿರಸ್ಕರಿಸಿದ ಉಪವಿಭಾಗಾಧಿಕಾರಿಗಳು, ಸೋಮವಾರ ಸಂಜೆಯೊಳಗೆ ಎಲ್ಲಾ ಗೂಡಂಗಡಿಗಳನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಮಂಗಳವಾರ ಇಲಾಖೆ ಮುಖಾಂತರ ತೆರವುಗೊಳಿಸಲಾಗುವುದು. ಕಾರ್ಯಾಚರಣೆ ವಿರೋಧಿಸಿ ಆತ್ಮಹತ್ಯೆಗೆ ಮುಂದಾದಲ್ಲಿ ಕೇಸು ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಗೂಡಂಗಡಿಗಳಿಗೆ ಪ್ರವಾಸೋದ್ಯಮ ಇಲಾಖೆಯ ಜಾಗದಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಡಲಾಗುವುದು. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.
ಅಧಿಕಾರಿಗಳ ಭರವಸೆ ಮೇರೆಗೆ ಗೂಡಂಗಡಿ ಮಾಲೀಕರು ಸ್ವಯಂಪ್ರೇರಿತರಾಗಿ ಅಂಗಡಿಗಳ ತೆರವು ಕಾರ್ಯ ಆರಂಭಿಸಿದರು. ಇದೇ ಸಂದರ್ಭ ವಿಕಲಚೇತನ ನಾರ್ಬೆಟ್ ಎಂಬುವರು ಅಂಗಡಿ ತೆರವು ಕಾರ್ಯ ಆರಂಭಿಸದಿರುವುದರಿಂದ ಅಧಿಕಾರಿಗಳು ಜೆಸಿಬಿ ಮೂಲಕ ಅಂಗಡಿ ತೆರವುಗೊಳಿಸಲು ಮುಂದಾದರು. ಕೂಡಲೇ ಸ್ಥಳೀಯರು ಅಂಗಡಿ ತೆರವುಗೊಳಿಸುವ ಭರವಸೆ ನೀಡಿದ ಬಳಿಕ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು.
ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಉಪವಿಭಾಗಾಧಿಕಾರಿ ಭೂಬಾಲನ್, ತ್ರಾಸಿ-ಮರವಂತೆ ತೀರದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಅಂಗಡಿಗಳನ್ನು ತೆರವುಗೊಳಿಸುವಂತೆ ಮೂರು ವರ್ಷಗಳಿಂದ ಸೂಚನೆ ನೀಡಲಾಗುತ್ತಿದೆ. ಆದರೆ ಯಾರೂ ಕೂಡ ಅಂಗಡಿ ತೆರವು ಮಾಡಿಲ್ಲ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಭಾರಿ ವಾಹನಗಳು ನಿಲ್ಲುತ್ತಿರುವುದರಿಂದ ಅಪಘಾತಗಳು ಹೆಚ್ಚಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಂಡಿದ್ದು, ಪ್ರವಾಸೋದ್ಯಮ ಇಲಾಖೆಯಿಂದ ವಿವಿಧ ಯೋಜನೆಗಳು ಅನುಷ್ಠಾನಗೊಳ್ಳಲಿದೆ. ಈ ಎಲ್ಲಾ ಕಾರಣಗಳಿಂದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಗೂಡಂಗಡಿಗಳನ್ನು ತೆರವುಗೊಳಿಸುವುದು ಅನಿವಾರ್ಯವಾಗಿದೆ. ಇವರೆಲ್ಲರಿಗೂ ಇಲಾಖೆ ವತಿಯಿಂದ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಆ ಬಳಿಕ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಅನಿತಾ, ತ್ರಾಸಿ-ಮರವಂತೆ ಕಡಲ ತೀರದ ಅಭಿವೃದ್ಧಿಗೆ ಸುಮಾರು 1.36ಕೋಟಿ ಅನುದಾನ ಮಂಜೂರಾಗಿದೆ. ಮರವಂತೆ ದೇವಸ್ಥಾನದ ಸಮೀಪ ಇಲಾಖೆಯ 1.10 ಎಕ್ರೆ ಸ್ಥಳದಲ್ಲಿ ಮತ್ತು ತ್ರಾಸಿ ಪ್ರವಾಸಿ ಮಂದಿರದ ಬಳಿ ವಾಹನಗಳ ಪಾರ್ಕಿಂಗ್ ಸೇರಿದಂತೆ ಪ್ರವಾಸಿಗರಿಗೆ ಬೇಕಾಗುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು. ಮರೈನ್ ಡ್ರೈವ್ ನಿರ್ಮಾಣ ಮಾಡಲು ೨೧ ಲಕ್ಷ ರೂ. ಅನುದಾನ ಲಭ್ಯವಿದ್ದು, ಫುಡ್ ಪಾರ್ಕ್ ನಿರ್ಮಾಣ ಮಾಡಲು ಇಲಾಖೆ ಕ್ರಮಕೈಗೊಂಡಿದೆ. ಕೋಸ್ಟಲ್ ಟೂರಿಸಮ್ಗೆ ಹೆಚ್ಚಿನ ಉತ್ತೇಜನ ನೀಡುವ ದೃಷ್ಟಿಯಿಂದ ಇಲಾಖೆ ಮೂಲಕ ವಿವಿಧ ಯೋಜನೆಗಳನ್ನು ತ್ರಾಸಿ-ಮರವಂತೆ ತೀರ ಪ್ರದೇಶದಲ್ಲಿ ಅನುಷ್ಠಾನಗೊಳಿಸಲಾಗುತ್ತದೆ ಎಂದರು.
ಬೈಂದೂರು ತಹಶೀಲ್ದಾರ್ ಪುರಂದರ ಹೆಗ್ಡೆ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಜಿಎಂ ರಘುನಾಥ ಆಚಾರ್ಯ, ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಪರಮೇಶ್ವರ ಗುಣಗ, ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಗುತ್ತಿಗೆ ಕಂಪೆನಿ ಐಆರ್ಬಿಯ ಇಂಜಿನಿಯರ್ ಯೋಗೇಂದ್ರಪ್ಪ, ಜಿಪಂ ಸದಸ್ಯೆ ಶೋಭಾ ಜಿ.ಪುತ್ರನ್ ಮೊದಲಾದವರು ಉಪಸ್ಥಿತರಿದ್ದರು.
ಕಳೆದ 13 ವರ್ಷಗಳಿಂದ ತ್ರಾಸಿ ಕಡಲ ತೀರದ ಬದಿಯಲ್ಲಿ ಗೂಡಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದು, ಗೂಡಂಗಡಿಯೇ ನಮ್ಮ ಜೀವನಾಧಾರ. ಶನಿವಾರ ಏಕಾಏಕಿ ಗೂಡಂಗಡಿಗಳನ್ನು ತೆರವುಗೊಳಿಸಬೇಕೆಂದು ನೋಟಿಸ್ ನೀಡಲಾಗಿದ್ದು, ಇಂದು ಮುಂಜಾನೆ ಜೆಸಿಬಿ ಮೂಲಕ ಗೂಡಂಗಡಿಗಳನ್ನು ತೆರವುಗೊಳಿಸಲು ಮುಂದಾಗಿರುವ ಇಲಾಖಾಧಿಕಾರಿಗಳ ಕ್ರಮ ಖಂಡನೀಯ. ಗೂಡಂಗಡಿಗಳನ್ನು ತೆರವುಗೊಳಿಸಿ ನಮ್ಮಂತವರನ್ನು ಬೀದಿ ಪಾಲು ಮಾಡಲಾಗುತ್ತಿದೆ. ಜೀವನ ನಡೆಸುವುದು ಕಷ್ಟವಾಗುತ್ತಿರುವ ಇಂದಿನ ದಿನಗಳಲ್ಲಿ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿರುವ ಇಲಾಖೆಯ ಅಧಿಕಾರಿಗಳ ಕ್ರಮವನ್ನು ತೀವ್ರವಾಗಿ ವಿರೋಧಿಸುತ್ತೇವೆ - ರಾಜಶೇಖರ ಕುಂದರ್, ವ್ಯಾಪಾರಿಗೂಡಂಗಡಿ ತೆರವಿಗೆ ನಮ್ಮ ವಿರೋಧವಿಲ್ಲ. ಆದರೆ ಸಮಯಾವಕಾಶ ನೀಡದೆ ಏಕಾಏಕಿ ಗೂಡಂಗಡಿಗಳನ್ನು ತೆರವು ಮಾಡಿ ಬಡ ವ್ಯಾಪಾರಿಗಳನ್ನು ಬೀದಿ ಪಾಲು ಮಾಡುತ್ತಿರುವ ಅಧಿಕಾರಿಗಳ ಕ್ರಮ ಖಂಡನೀಯ. ಗೂಡಂಗಡಿ ತೆರವಿನಿಂದ ಜೀವನದಲ್ಲಿ ಮುಂದೇನು ಮಾಡುವುದು ಎಂಬ ಚಿಂತೆ ಕಾಡುತ್ತಿದೆ. ಸ್ವಲ್ಪವೂ ಕನಿಕರ ತೋರದೆ ಸಾಕಷ್ಟು ಸಮಯಾವಕಾಶ ನೀಡದೆ ಬಡ ಗೂಡಂಗಡಿ ವ್ಯಾಪಾರಿಗಳ ಮೇಲೆ ದೌರ್ಜನ್ಯ ಎಸಗುತ್ತಿರುವುದು ಸರಿಯಲ್ಲ - ಶೇಖರ ಪೂಜಾರಿ