ಕಾಸರಗೋಡು,ಸೆ.10(DaijiworldNews/HR): ಕುಂಬಳೆ ನಾಯ್ಕಾಪುವಿನ ಮಿಲ್ ನೌಕರ ಹರೀಶ್ ( 36) ರವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೋರ್ವ ಆರೋಪಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕುಂಬಳೆ ರೈಲ್ವೆ ಸ್ಟೇಷನ್ ರಸ್ತೆಯ ಸಚಿನ್ ( 27) ಎಂದು ಗುರುತಿಸಲಾಗಿದೆ.
ಆಗಸ್ಟ್ 18 ರಂದು ರಾತ್ರಿ ಬೈಕ್ ನಲ್ಲಿ ಮನೆಗೆ ಮರಳುತ್ತಿದ್ದಾಗ ತಂಡವು ಕೊಲೆ ನಡೆಸಿತ್ತು. ಪ್ರಕರಣದ ನಾಲ್ಕನೆ ಆರೋಪಿ ಸಚಿನ್ ಆರೋಪಿಗಳು ಬಂದಿದ್ದ ಕಾರಿನ ಚಾಲಕನಾಗಿದ್ದನು. ಪ್ರಕರಣದ ಪ್ರಮುಖ ಆರೋಪಿ ಶ್ರೀಕುಮಾರ್ ನನ್ನು ಈ ಹಿಂದೆ ಬಂಧಿಸಲಾಗಿತ್ತು.
ಎರಡನೇ ಹಾಗೂ ಮೂರನೇ ಆರೋಪಿಗಳಾಗಿದ್ದ ರೋಶನ್( 19) ಮತ್ತು ಮಣಿಕಂಠ( 18) ಕುಂಬಳೆ ಶೇಡಿಗುಮ್ಮೆಯ ಕಾಡಿನಲ್ಲಿ ಕೃತ್ಯ ನಡೆಸಿದ ಮರುದಿನ ಆತ್ಮಹತ್ಯೆ ಮಾಡಿಕೊಂಡಿದ್ದರು.
ಪ್ರಕರಣದಲ್ಲಿ ಒಟ್ಟು ನಾಲ್ವರು ಆರೋಪಿಗಳಿದ್ದು, ಇಬ್ಬರು ಆತ್ಮಹತ್ಯೆ ಮಾಡಿಕೊಂಡರೆ ಇಬ್ಬರನ್ನು ಬಂಧಿಸಲಾಗಿದೆ. ಇನ್ಯಾರಾದರೂ ಕೃತ್ಯಕ್ಕೆ ಸಹಾಯ ಮಾಡಿದ್ದರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.