ಕಾಸರಗೋಡು, ಸೆ.10 (DaijiworldNews/SM): ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಕ್ಕೆ ಸಿಲುಕಿರುವ ಮಂಜೇಶ್ವರ ಶಾಸಕ ಎಂ. ಸಿ. ಖಮರುದ್ದೀನ್ ವಿರುದ್ಧ ಶಿಸ್ತು ಕ್ರಮಕ್ಕೆ ಮುಸ್ಲಿಂ ಲೀಗ್ ರಾಜ್ಯ ಸಮಿತಿ ಮುಂದಾಗಿದೆ.

ಯು.ಡಿ.ಎಫ್. ಜಿಲ್ಲಾಧ್ಯಕ್ಷ ಸ್ಥಾನದಿಂದ ಖಮರುದ್ದೀನ್ ರನ್ನು ತೆರವುಗೊಳಿಸಿದ್ದು, ಶಾಸಕ ಸ್ಥಾನ ಬಿಟ್ಟು ಪಕ್ಷದ ಎಲ್ಲಾ ಸ್ಥಾನಮಾನಗಳಿಂದ ದೂರ ಸರಿಯುವಂತೆ ಪಕ್ಷದ ವರಿಷ್ಟರು ನಿರ್ದೇಶನ ನೀಡಿದ್ದಾರೆ.
ಮುಂದಿನ ಆರು ತಿಂಗಳೊಳಗೆ ಗ್ರಾಹಕರ ಠೇವಣಿಯನ್ನು ಮರಳಿಸಬೇಕು. ಖಮರುದ್ದೀನ್ ಅಲ್ಲದೆ ಈ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಎಲ್ಲಾ ಮುಖಂಡರು ಸ್ಥಾನದಿಂದ ದೂರ ಸರಿಯುವಂತೆ ಪಕ್ಷವು ತಿಳಿಸಿದೆ. ಠೇವಣಿದಾರರ ಮಾಹಿತಿ ಹಾಗೂ ಅಸ್ತಿ ಕುರಿತ ಸಮಗ್ರ ವರದಿಯನ್ನು ಸೆ. 30 ರೊಳಗೆ ಸಲ್ಲಿಸುವಂತೆ ಪಕ್ಷವು ಆದೇಶಿದೆ.
ಈ ಬಗ್ಗೆ ಮಧ್ಯಸ್ಥಿಕೆ ವಹಿಸಲು ಪಕ್ಷದ ಜಿಲ್ಲಾ ಕೋಶಾಧಿಕಾರಿಯವರಿಗೆ ಜವಾಬ್ದಾರಿ ನೀಡಲಾಗಿದೆ. ಪ್ಯಾಶನ್ ಜ್ಯುವೆಲ್ಲರಿಗೆ ಠೇವಣಿ ಹೂಡಿಕೆ ವಂಚನೆಗೆ ಸಂಬಂಧಪಟ್ಟಂತೆ ಗ್ರಾಹಕರು ದೂರು ಸಲ್ಲಿಸಿದ ಹಿನ್ನಲೆಯಲ್ಲಿ ಹಾಗೂ ಶಾಸಕರ ವಿರುದ್ಧ ಪ್ರತಿಭಟನೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಪಕ್ಷದ ರಾಜ್ಯ ಸಮಿತಿ ಮಹತ್ವದ ತೀರ್ಮಾನಕ್ಕೆ ಬಂದಿದೆ.
ಸುಮಾರು 800 ಗ್ರಾಹಕರಿಂದ 132 ಕೋಟಿ ರೂಪಾಯಿಗಳ ಠೇವಣಿ ಪಡೆದು ವಂಚಿಸಿರುವುದಾಗಿ ದೂರುಗಳು ಕೇಳಿಬರುತ್ತಿದ್ದು, 2018 ರಿಂದ ಎಂ.ಸಿ. ಖಮರುದ್ದೀನ್ ಅಧ್ಯಕ್ಷರಾಗಿರುವ ಫ್ಯಾಶನ್ ಗೋಲ್ಡ್ ಇಂಟರ್ ನ್ಯಾಶನ್ ಸಂಸ್ಥೆ ಮುಚ್ಚಿದೆ.