ಉಡುಪಿ, ಸೆ. 10 (DaijiworldNews/SM): ಬ್ರಹ್ಮಾವರ ಕಾಜ್ರಳ್ಳಿ ಅನಿಶಾ ಪೂಜಾರಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಸಿಓಡಿ ತನಿಖೆಯಾಗಬೇಕೆಂದು ಮೃತ ಯುವತಿಯ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಅನಿಶಾಳ ತಾಯಿ ಹೈ ಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿ ಆಗ್ರಹಿಸಿದ್ದಾರೆ. ತನ್ನ ಮಗಳ ಸಾವಿನ ಕುರಿತಂತೆ ಸಿಒಡಿ ತನಿಖೆಯಾಗಲೆಂದು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಇನ್ನು ಪ್ರಕರಣದ ಆರೋಪಿ ಚೇತನ್ ಶೆಟ್ಟಿ ಅನಿಶಾಳೊಂದಿಗೆ ಪ್ರೀತಿಯ ನಾಟಕವಾಡಿ ಬಳಿಕ ಯುವತಿ ಮದುವೆಯ ಪ್ರಸ್ತಾಪವೆತ್ತಿದ ಸಂದರ್ಭದಲ್ಲಿ ಮನೆಯವರ ವಿರೋಧವಿದೆ ಎಂದು ಹೇಳಿ ಯುವತಿಯಿಂದ ದೂರವಾಗಲು ಯತ್ನಿಸಿದ್ದ. ಅನಿಶಾ ಎಷ್ಟೇ ಮನವರಿಕೆ ಮಾಡಿದರೂ ಕೂಡ ಆತ ಆಕೆಯನ್ನು ಮದುವೆಯಾಗಲು ಸಿದ್ಧನಿರಲಿಲ್ಲ. ಇದರಿಂದಾಗಿ ನೊಂದುಕೊಂಡಿದ್ದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಳು. ಈ ವೇಳೆ ಯುವತಿ ಯುವಕನೊಂದಿಗೆ ನಡೆಸಿದ ಸಂಭಾಷಣೆ ಹಾಗೂ ಡೆತ್ ನೋಟ್ ಮಾಧ್ಯಮಗಳಿಗೆ ಲಭ್ಯವಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ದೈಜಿವರ್ಲ್ಡ್ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಬಳಿಕ ಆರೋಪಿಯನ್ನು ಬಂಧಿಸಲಾಗಿತ್ತು. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಇದೀಗ ಅನಿಶಾ ಸಾವಿನಿಂದ ನೊಂದುಕೊಂಡಿರುವ ಕುಟುಂಬ ಸದಸ್ಯರು ಆಕೆಯ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ನಮಗೆ ಮಗಳ ಸಾವಿನ ಬಗ್ಗೆ ಬಹಳಷ್ಟು ಸಂಶಯವಿದೆ. ಈ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿರುವ ಮೃತ ಯುವತಿಯ ತಾಯಿ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.