ಬಂಟ್ವಾಳ, ಮೇ 07: ಅತ್ಯಂತ ಕುತೂಹಲ ಹಾಗೂ ಜಿದ್ದಾಜಿದ್ದಿನಿಂದ ಕೂಡಿದ ಕ್ಷೇತ್ರವಾಗಿರುವ ಬಂಟ್ವಾಳದಲ್ಲಿ ಬಿಜೆಪಿ ವಿರುದ್ಧ ಪೋಸ್ಟರ್ ವಾರ್ ಮತ್ತೆ ಆರಂಭವಾಗಿದೆ.
ಇತ್ತೀಚೆಗೆ ಬಂಟ್ವಾಳದಲ್ಲಿ ಕಾಂಗ್ರೆಸ್ ವಿರುದ್ಧ ಮನೆ ಬಾಗಿಲಿಗೆ ಪೋಸ್ಟರ್ ಅಂಟಿಸುವ ಅಭಿಯಾನ ಭಾರೀ ಸುದ್ದಿಯಾಗಿತ್ತು. ಆದರೆ ಈಗ ಬಿಜೆಪಿ ವಿರುದ್ಧ ಪೋಸ್ಟರ್ ವಾರ್ ಆರಂಭವಾಗಿದೆ. ಈ ಕ್ಷೇತ್ರದ ನೂರಾರು ಮನೆಗಳಲ್ಲಿ ಕಾಂಗ್ರೆಸ್ ವಿರುದ್ಧ ಹಚ್ಚಿದ್ದ ಪೋಸ್ಟರ್ ದೇಶದಾದ್ಯಂತ ವ್ಯಾಪಕ ಪ್ರಚಾರ ಪಡೆದಿತ್ತು. ಇದೀಗ ಬಿಜೆಪಿಯ ಈ ಪೋಸ್ಟರ್ ರಾಜಕೀಯದ ವಿರುದ್ಧ ಕಾಂಗ್ರೆಸ್ ಕೂಡ ಪೋಸ್ಟರ್ ಅಭಿಯಾನ ಅರಂಭಿಸಿದೆ.
ಬಂಟ್ವಾಳದ ಸಿದ್ದಕಟ್ಟೆ, ನಾವೂರು, ಬಡಕಬೈಲು ಮೊದಲಾದ ಪ್ರದೇಶಗಳಲ್ಲಿ ಆರಂಭವಾಗಿರುವ ಈ ಪೋಸ್ಟರ್ ಪ್ರತಿ ಚಳವಳಿ ಈಗ ಬಂಟ್ವಾಳ ಕ್ಷೇತ್ರದಾದ್ಯಂತ ವ್ಯಾಪಿಸಿದೆ. "ತಮ್ಮ ರಾಜಕೀಯದ ನೆಲೆಗಾಗಿ ಹಿಂದೂಗಳನ್ನೇ ಹತ್ಯೆ ಮಾಡಿದ ಹಿಂದುತ್ವವಾದಿಗಳಿಗೆ ಧಿಕ್ಕಾರ. ಮತ ಕೇಳಲು ನಮ್ಮ ಮನೆಗೆ ಬರಬೇಡಿ” ಎಂಬ ಪೋಸ್ಟರ್ ಈಗ ಹಲವಾರು ಮನೆಗಳಲ್ಲಿ ಕಂಡು ಬರತೊಡಗಿವೆ.
ಕಳೆದ ಕೆಲವು ದಿನಗಳ ಹಿಂದೆ ಬಂಟ್ವಾಳ ತಾಲೂಕು ವ್ಯಾಪ್ತಿಯ ಕನ್ಯಾನ, ವಿಟ್ಲ ಪರಿಸರದ ಮನೆಗಳಲ್ಲಿ ಹಿಂದೂ ವಿರೋಧಿಗಳಿಗೆ ನಮ್ಮ ಮನೆಗಳಿಗೆ ಪ್ರವೇಶವಿಲ್ಲ ಎನ್ನುವ ಭಿತ್ತಿಪತ್ರಗಳು ಕೆಲವು ಮತದಾರರ ಮನೆ ಬಾಗಿಲಲ್ಲಿ ರರಾಜಿಸುತ್ತಿದ್ದವು. ಇದೀಗ ಸಿದ್ಧಕಟ್ಟೆ, ಸಂಗಬೆಟ್ಟು ಪರಿಸರದಲ್ಲಿರುವ ಕೆಲ ಮನೆಗಳ ಎದುರು ಸಿದ್ಧಕಟ್ಟೆ ಭಾರತಿ ಕೊಲೆಗಾರರಿಗೆ ನಮ್ಮ ಮನೆಗೆ ಪ್ರವೇಶವಿಲ್ಲ ಎಂಬ ಭಿತ್ತಿಪತ್ರ ಅಂಟಿಸಲಾಗಿದ್ದರೆ, ಮತ್ತೊಂದೆಡೆ ಹರೀಶ್ ಪೂಜಾರಿ ನಾವೂರು ಹತ್ಯೆ ನಡೆಸಿದ ಬಿಜೆಪಿಯವರಿಗೆ ನಮ್ಮ ಮನೆಗೆ ಪ್ರವೇಶ ಇಲ್ಲ ಎಂಬ ಪೋಸ್ಟರ್ ಅಂಟಿಸಲಾಗಿದೆ.
ಈ ಪೋಸ್ಟರ್ ರಾಜಕೀಯ ಕುರಿತು ಬಂಟ್ವಾಳದ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆ ಆರಂಭವಾಗಿದೆ.