ಮಂಗಳೂರು, ಮೇ 07: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅವರ ಕುಟುಂಬದವರ ವಿರುದ್ದ ವಾಗ್ದಾಳಿ ನಡೆಸುವುದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸ ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ, ಹಾಗೂ ಮಾಜಿ ಕೇಂದ್ರ ಸಚಿವ ಆರ್ ಪಿ ಎನ್ ಸಿಂಗ್ ಹೇಳಿದ್ದಾರೆ. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮೇ 7ರ ಸೋಮವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಮಂಗಳೂರಿನ ಪ್ರಚಾರ ಸಮಾವೇಶದಲ್ಲಿ ನರೇಂದ್ರ ಮೋದಿ ಅವರು ಮಾಡಿದ 45 ನಿಮಿಷಗಳ ಭಾಷಣದಲ್ಲಿ ಅಭಿವೃದ್ದಿ ಮತ್ತು ಸಮಸ್ಯೆಗಳ ಬಗ್ಗೆ ಮಾತನಾಡಿದ್ದು ಕೇವಲ 5 ನಿಮಿಷ ಮಾತ್ರ. ಮೋದಿ ಈ ಹಿಂದೆ ಚುನಾವಣೆಯಲ್ಲಿ ನೀಡಿದ ಭರವಸೆಗಳ ಬಗ್ಗೆ ಸೊಲ್ಲೆತ್ತದೆ, ತಮ್ಮ ಹಳೆಯ ಭಾಷಣಗಳಿಗೆ ಮತ್ತಷ್ಟು ಸುಳ್ಳುಗಳನ್ನು ಸೇರಿದ್ದಾರೆ. ಹೀಗಾಗಿ ಅವರ ಭಾಷಣದ ಮದ್ಯೆ, ಇಪ್ಪತ್ತೈದು ಬಾರಿ ಅವರ ಟಿಪ್ಪಣಿ ಕಾಗದ ಕಂಡಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ನರೇಂದ್ರ ಮೋದಿ ಯಾವುದೇ ಅಜೆಂಡಾ ಅಥವಾ ನಿರ್ದಿಷ್ಟ ಗುರಿಯಿಲ್ಲದೆ ರಾಜ್ಯದಾದ್ಯಂತ ಪ್ರಚಾರ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಗೆ ಮುಂಚೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಪಾಕಿಸ್ತಾನ ಮತ್ತು ಚೀನಾ ಮೇಲೆ ಸಂಪೂರ್ಣ ಹಿಡಿತ ಸಾಧಿಸುತ್ತೇವೆ ಎಂದು ಹೇಳುತ್ತಿದ್ದರು. ಆದರೆ ಮಾತು ಮರೆತ ನರೇಂದ್ರ ಮೋದಿ ಅವರ ಅಧಿಕಾರ ಅವಧಿಯಲ್ಲೇ ಅತೀ ಹೆಚ್ಚು ಕದನ ವಿರಾಮ ಉಲ್ಲಂಘನೆಯಾಗಿದೆ. ಬಿಜೆಪಿಯ ಅಧಿಕಾರವಧಿಯಲ್ಲೇ ಚೀನಾ ಡೋಕ್ಲಾದ ಮೇಲೆ ಹಿಡಿತ ಸಾಧಿಸಿತು, ದೇಶದ ಅನೇಕ ಕೆಚ್ಚೆದೆ ಸೈನಿಕರು ಹುತಾತ್ಮರಾಗಬೇಕಾಯಿತು ಎಂದು ಕಿಡಿಕಾರಿದರು.
ಅಮಂತ್ರಣವಿಲ್ಲದೆ ಪಾಕಿಸ್ತಾನ ಹೋಗಿ ಬಿರಿಯಾನಿ ತಿಂದ ಪ್ರಧಾನಿಗೆ, ಜನರ ಬಗ್ಗೆಯಾಗಲಿ ಸೈನ್ಯದ ಬಗ್ಗೆಯಾಗಲಿ ಕಾಳಜಿಯಿಲ್ಲ. ರಾಜಕೀಯ ದುರುದ್ದೇಶಕ್ಕಾಗಿ ಸೈನ್ಯವನ್ನು ಬಳಕೆ ಮಾಡಿದ ಪ್ರಧಾನಿ ಮೋದಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಪಕ್ಷಕ್ಕೆ ಉತ್ತರ ಪ್ರದೇಶದ ಸಿಎಂ ಯೋಗಿ ಒಬ್ಬ ಸ್ಟಾರ್ ಪ್ರಚಾರಕರಾಗಿದ್ದಾರೆ. ಆದರೆ ಮೊದಲನೆಯದಾಗಿ ಯೋಗಿ ತನ್ನ ರಾಜ್ಯ ಮತ್ತು ತಮ್ಮ ಕ್ಷೇತ್ರದ ಮೇಲೆ ಗಮನ ಹರಿಸುವುದು ಉತ್ತಮ. ಒಂದು ರೂಪಾಯಿ , ಐವತ್ತು ಪೈಸೆಯ ಚೆಕ್ ಗಳನ್ನು ರೈತರಿಗೆ ವಿತರಿಸಿ ಸಾಲ ಮನ್ನಾದ ನಾಟಕ ಆಡಿದ್ದಾರೆ. ಕರ್ನಾಟಕದಲ್ಲಿ ಪ್ರಚಾರ ಮಾಡುತ್ತ ಕಾಲ ಕಳೆಯುವ ಬದಲು, ಸಿದ್ದರಾಮಯ್ಯ ಸರ್ಕಾರ ಮಾಡಿದ ಅಭಿವೃದ್ದಿ ಕೆಲಸವನ್ನು ನೋಡಿ ಕಲಿಯಬಹುದು ಎಂದು ಲೇವಡಿ ಮಾಡಿದರು. ಪತ್ರಿಕಾಗೋಷ್ಟಿಯಲ್ಲಿ ಉಳಿದಂತೆ ಮಹಾರಾಷ್ಟ್ರ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಸುರೇಶ್ ಶೆಟ್ಟಿ, ಜೈವೀರ್ ಶೆರ್ಗಿಲ್, ಮುಂತಾದವರು ಉಪಸ್ಥಿತರಿದ್ದರು.