ಕಾಸರಗೋಡು, ಸೆ 11 (DaijiworldNews/SM): ಕಾಸರಗೋಡು-ಮಂಗಳೂರು ನಡುವೆ ಸೆಪ್ಟೆಂಬರ್ 21ರಿಂದ ಕೆ ಎಸ್ ಆರ್ ಟಿ ಸಿ ಬಸ್ ಸಂಚಾರ ಆರಂಭಗೊಳ್ಳಲಿದೆ. ಈ ಬಗ್ಗೆ ಇದೀಗ ಆದೇಶ ಹೊರಬಿದ್ದಿದೆ.

ಕೊರೋನಾ ಸೋಂಕು ಹೆಚ್ಚಳವಾಗುತ್ತಿದ್ದಂತೆ ಕಳೆದ ಮಾರ್ಚ್ ತಿಂಗಳಿನಿಂದ ಅಂತರಾಜ್ಯ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತು. ಜೊತೆಗೆ ಗಡಿ ರಸ್ತೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಈಗಾಗಲೇ ಉಭಯ ಜಿಲ್ಲಾಡಳಿತಗಳ ಆದೇಶದ ಬಳಿಕ ಕೆಲವು ಪ್ರಮುಖ ಗಡಿಗಳನ್ನು ತೆರವುಗೊಳಿಸಿ ಅಂತರಾಜ್ಯ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದೀಗ ಮಂಗಳೂರು-ಕಾಸರಗೋಡು ಜಿಲ್ಲೆಗಳ ನಡುವೆ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಆನ್ ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಈಗಾಗಲೇ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಯಾಣಿಕರ ಬೇಡಿಕೆಗನುಗುಣವಾಗಿ ಬಸ್ ಸಂಚಾರ ನಡೆಸಲಿವೆ. ಒಂದು ಬಸ್ಸಿಗೆ 40 ಮಂದಿ ಪ್ರಯಾಣಿಕರಿದ್ದಲ್ಲಿ ಮಾತ್ರವೇ ಸಂಚಾರ ನಡೆಸಲಿದೆ. ಮೊದಲ ಹಂತದಲ್ಲಿ ಕಾಸರಗೋಡು-ಮಂಗಳೂರು ಹಾಗೂ ಕಾಸರಗೋಡು-ಪಂಜಿಕ್ಕಲ್ ರಸ್ತೆಗಳಲ್ಲಿ ಮಾತ್ರವೇ ಬಸ್ ಸಂಚಾರ ನಡೆಸಲಿದೆ ಎಂದು ತಿಳಿದು ಬಂದಿದೆ.