ಕಾಸರಗೋಡು, ಸೆ 12 (DaijiworldNews/SM): ಕೊರೋನಾದಿಂದ ಮೃತಪಟ್ಟ ಮಹಿಳೆಯ ಮೃತದೇಹ ಕೊಂಡೊಯ್ಯುತ್ತಿದ್ದ ಅಂಬ್ಯುಲೆನ್ಸ್ ಹೊಂಡಕ್ಕೆ ಬಿದ್ದ ಘಟನೆ ಕಾಸರಗೋಡು ಸರಕಾರಿ ಜನರಲ್ ಆಸ್ಪತ್ರೆ ಬಳಿ ಇಂದು ಬೆಳಿಗ್ಗೆ ನಡೆದಿದೆ.

ಪೊಯಿನಾಚಿಯ ವೃದ್ದೆಯ ಮೃತದೇಹ ಅಂಬ್ಯುಲೆನ್ಸ್ ನಲ್ಲಿರಿಸಿ ಮುಂದಕ್ಕೆ ಚಲಿಸುತ್ತಿದ್ದಾಗ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಆಸ್ಪತ್ರೆ ಆವರಣದ ಹೊಂಡಕ್ಕೆ ಉರುಳಿ ಬಿದ್ದಿದೆ. ಮನೆಯಲ್ಲಿ ಕುಸಿದು ಬಿದ್ದಿದ್ದ ವೃದ್ಧೆಯನ್ನು ಜನರಲ್ ಆಸ್ಪತ್ರೆಗೆ ತಂದು ತಪಾಸಣೆ ನಡೆಸಿದಾಗ ಕೊರೋನ ಪಾಸಿಟಿವ್ ಪತ್ತೆಯಾಗಿತ್ತು. ಬಳಿಕ ವೃದ್ಧೆಯನ್ನು ಚಿಕಿತ್ಸೆಗೆ ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಮೃತಪಟ್ಟಿದ್ದರು.
ಬಳಿಕ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತರಲಾಗಿತ್ತು. ಎಲ್ಲಾ ಪ್ರಕ್ರಿಯೆ ಕಳೆದು ಕೋವಿಡ್ ಮಾನದಂಡದಂತೆ ದಫನಕ್ಕೆಕೊಂಡೊಯ್ಯುತ್ತಿದ್ದಾಗ ಘಟನೆ ನಡೆದಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಮೃತದೇಹವನ್ನು ಇನ್ನೊಂದು ಅಂಬ್ಯುಲೆನ್ಸ್ ಗೆ ಹಸ್ತಾಂತರಿಸಿ ಬಳಿಕ ಕೊಂಡೊಯ್ಯಲಾಯಿತು. ಹೊಂಡಕ್ಕೆ ಬಿದ್ದ ಅಂಬ್ಯುಲೆನ್ಸ್ ನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೇಲಕ್ಕೆತ್ತಿದರು.