ಮಂಗಳೂರು, ಸೆ 11 (DaijiworldNews/SM): ಕರಾವಳಿ ಭಾಗದಿಂದ ತೀವ್ರ ವಿರೋಧದ ಬಳಿಕವೂ ಆರಂಭಗೊಂಡ ಎತ್ತಿನಹೊಳೆ ಕಾಮಗಾರಿ ಮುಂದಿನ ವರ್ಷ ಪೂರ್ನಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಈ ಬಗ್ಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದು, 2021ರ ಜೂನ್ ಒಳಗೆ ಎತ್ತಿನಹೊಳೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಳ್ಳಲಿದ್ದಾರೆ ಎಂದಿದ್ದಾರೆ.

2021ರ ಜೂನ್ ಒಳಗೆ ಎತ್ತಿನಹೊಳೆಯ ಮೊದಲ ಹಂತದ ಕಾಮಗಾರಿ ಪೂರ್ಣವಾಗಲಿದೆ. ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳ್ಳುತ್ತಿದೆ ಎಂದಿರುವ ಸಚಿವರು ಮುಂಡಿನ ವರ್ಷದ ಜೂನ್ ಒಳಗಾಗಿ ಮೊದಲ ಹಂತದ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಇನ್ನು ರಾಜ್ಯದಲ್ಲಿ ಜಲಸಂಪನ್ಮೂಲ ಇಲಾಖೆ ಕೈಗೆತ್ತಿಕೊಂಡಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ರೂ.1.10 ಲಕ್ಷ ಕೋಟಿ ಹಣ ಬೇಕಾಗಿದೆ. ಸರಕಾರ ಇವುಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಲಿದೆ. ಹಣಕಾಸಿನ ಮುಗ್ಗಟ್ಟು ಎಷ್ಟೇ ಇದ್ದರೂ ಕೂಡ ರೈತರು ಹಾಗೂ ಜನಸಾಮಾನ್ಯರಿಗೆ ನೀರಿನ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಲಾಗುವುದೆಂದು ಅವರು ತಿಳಿಸಿದ್ದಾರೆ.
ಇನ್ನು ಎತ್ತಿನಹೊಳೆ ಯೋಜನೆಗೆ ಕಾರ್ಯಯೋಜನೆ ಸಿದ್ಧಗೊಂಡ ಸಂದರ್ಭದಲ್ಲಿ ಕರಾವಳಿಯ ಜನ ನಾಯಕರು ತೆಪ್ಪಗಾಗಿದ್ದರು. ಬಳಿಕ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ತಿಳಿದುಕೊಂಡ ಕರಾವಳಿಯ ಪರಿಸರವಾದಿಗಳು, ಹೋರಾಟಗಾರರು, ವಿವಿಧ ಸಂಘ ಸಂಸ್ಥೆಗಳು ನಿರಂತರ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಆದರೂ ಕೂಡ ಯೋಜನೆ ಮಾತ್ರ ನಿರಂತರವಾಗಿ ನಡೆದಿದೆ. ಮತ್ತೊಂದೆಡೆ ಯೋಜನೆಯಿಂದಾಗಿ, ಪಶ್ಚಿಮ ಘಟ್ಟದ ಕಾಡಿಗೂ ಕೂಡ ಹಾನಿಯುಂಟಾಗಿದೆ. ಇದು ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.
ಅವೈಜ್ಞಾನಿಕ ನದಿ ತಿರುವು ಯೋಜನೆಗೆ ಪರಿಸರವಾದಿಗಳ ತೀವ್ರ ವಿರೋಧ ವ್ಯಕ್ತಪಡಿಸಿದ ನಡುವೆಯೇ ಇದೀಗ ಯೋಜನೆ ಬಹುತೇಕ ಮುಗಿಯುತ್ತಿದೆ. ಆದರೆ, ಕರಾವಳಿ ಭಾಗದ ಜನ ನಾಯಕರು, ಸಚಿವರು, ಸಂಸದರು, ಶಾಸಕರು ತುಟಿ ಪಿಟಿಕ್ ಅನ್ನದೆ ಮೌನಕ್ಕೆ ಶರಣಾಗಿರುವುದಕ್ಕೆ ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.