ಉಡುಪಿ, ಸೆ. 13 (DaijiworldNews/MB) : ಗಾಂಜಾ ಸೇವನೆ ಮತ್ತು ದಂಧೆ ನಡೆಸಿದ ಆರೋಪದಲ್ಲಿ ಉಡುಪಿ ಜಿಲ್ಲೆಯಾದ್ಯಂತ 11 ಜನರನ್ನು ಬಂಧಿಸಲಾಗಿದೆ.

ಮಣಿಪಾಲದಲ್ಲಿ ಗಾಂಜಾ ಸೇವಿಸಿದ ಅನುಮಾನದ ಮೇಲೆ ಮಾರುಕ್ ಅಬ್ಬಾಸ್ (23), ಶಿವಪ್ರಸಾದ್ ಕೇಶವ್ (29) ಮತ್ತು ಅಕ್ಷಯ್ ಭಟ್ ಎಂಬವರನ್ನು ಬಂಧಿಸಲಾಗಿದ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅವರು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.
ಮಣಿಪಾಲದ ಶಿಂಬ್ರಾ ಸೇತುವೆ ಬಳಿ ಗಾಂಜಾ ಸೇವಿಸುತ್ತಿದ್ದ ಸಂದರ್ಭದಲ್ಲಿ ರಸೆಲ್ ವಿಯಾನ್ ಡಿಸೋಜಾ (25) ಎಂಬಾತನನ್ನು ಬಂಧಿಸಲಾಗಿದೆ. ಇನ್ನು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ಸಿದ್ಧಾರ್ಥ್ ಮಿದಾ ಎಂಬ ವ್ಯಕ್ತಿ ಸಿಕ್ಕಿಬಿದ್ದಿದ್ದು ಆತನಿಂದ 350 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಮಂಗಳೂರು ಕಡೆಗೆ ಪ್ರಯಾಣ ಮಾಡುತ್ತಿದ್ದ ಮೂವರು ಗಾಂಜಾ ಸೇವಿಸಿದ್ದ ಆರೋಪದಲ್ಲಿ ವಾಹನಗಳ ಪರಿಶೀಲನೆ ವೇಳೆ ಪಡುಬಿದ್ರಿ ಟೋಲ್ ಗೇಟ್ನಲ್ಲಿ ಮೂವರನ್ನು ಬಂಧಿಸಲಾಗಿದೆ. ಬಂಧಿತರು ಅಕ್ಷತ್ ಕುಮಾರ್, ಪವನ್ ಕುಮಾರ್ ಕೆ ಮತ್ತು ಯಜ್ಞೇಶ್ ಕೆ ಎಂದು ಗುರುತಿಸಲಾಗಿದೆ.
ಇನ್ನು ಗಾಂಜಾ ಸೇವನೆ ಮಾಡಿದ ಆರೋಪದಲ್ಲಿ ಕುಂದಾಪುರ ತಾಲ್ಲೂಕಿನ ಹೆಮ್ಮಾಡಿ ಜಂಕ್ಷನ್ನಲ್ಲಿ ಅಭಿಷೇಕ್ (24) ಮತ್ತು ಸುನಿಲ್ (23) ಎಂಬವರನ್ನು ಬಂಧಿಸಲಾಗಿದೆ. ಹಾಗೆಯೇ ಕುಂದಾಪುರ ತಾಲೂಕಿನ ಮೊಹಮ್ಮದ್ ಮಜಾಮಿಲ್ (26) ಎಂಬಾತನನ್ನು ಕೂಡಾ ಬಂಧಿಸಲಾಗಿದೆ.
ರಾಜ್ಯಾದ್ಯಂತ ಮಾದಕ ದ್ರವ್ಯ ಸೇವನೆ ಹಾಗೂ ದಂಧೆಯ ಬಗ್ಗೆ ತನಿಖೆಗಳು ನಡೆಯುತ್ತಲ್ಲೇ ಇದ್ದು ಈ ನಡುವೆ ಉಡುಪಿ ಪೊಲೀಸ್ ಇಲಾಖೆಯು ಕೂಡಾ ಗಾಂಜಾ ಸೇವನೆ ಹಾಗೂ ದಂಧೆಯ ವಿರುದ್ದ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.