ಮಂಗಳೂರು, ಸೆ. 13 (DaijiworldNews/SM): ಕರಾವಳಿಯ ಪ್ರಸಿದ್ಧ ನಾಗಾರಾಧನೆ ಕ್ಷೇತ್ರವಾಗಿರುವ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೋಮವಾರದಿಂದ ಎಲ್ಲಾ ಸೇವೆಗಳು ಪುನರಾರಂಭಗೊಳ್ಳಲಿದೆ ಎಂದು ದೇವಾಲಯದ ಆಡಳಿತಾಧಿಕಾರಿ ಎಂ.ಜೆ. ರೂಪಾ ಮಾಹಿತಿ ನೀಡಿದ್ದಾರೆ.

ಕೊರೋನಾ ಲಾಕ್ ಡೌನ್ ನಿಂದಾಗಿ ಕ್ಷೇತ್ರದಲ್ಲಿ ಎಲ್ಲಾ ಪ್ರಮುಖ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಹಾಗೂ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಇದೀಗ ಲಾಕ್ ಡೌನ್ ಸಡಿಲಿಕೆಗೊಂಡಿದ್ದು, ಮುಜರಾಯಿ ಇಲಾಖೆಯ ಆದೇಶದಂತೆ ಸೂಕ್ತ ಮುಂಜಾಗೃತಾ ಕ್ರಮದೊಂದಿಗೆ, ನಿಗಧಿತ ಭಕ್ತರೊಂದಿಗೆ ಸೇವೆಗಳ ಪುನರಾರಂಭಕ್ಕೆ ಕ್ರಮಕೈಗೊಳ್ಳಲಾಗಿದೆ.
ಸರ್ಪ ಸಂಸ್ಕಾರ, ಅಶ್ಲೇಷ ಬಲಿ ಸೇರಿದಂತೆ ಇತರ ಪ್ರಮುಖ ಸೇವೆಗಳು ಶ್ರೂ ಕುಕ್ಕೆ ಕ್ಷೇತ್ರದಲ್ಲಿ ಸೆಪ್ಟೆಂಬರ್ 14ರ ಸೋಮವಾರದಿಂದ ಪುನರಾರಂಭಗೊಳ್ಳಲಿದ್ದು, ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಭಕ್ತರು ಶ್ರೀ ದೇವರ ದರ್ಶನ ಪಡೆಯುವುದರ ಜೊತೆಗೆ ಪ್ರಮುಖ ಸೇವೆಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ.
ಪ್ರಮುಖ ಷರತ್ತುಗಳೊಂದಿಗೆ ಸೇವೆಗಳು ಆರಂಭ:
ಪ್ರತಿದಿನ ಮೂವತ್ತು ಭಕ್ತರಿಗೆ ಸರ್ಪ ಸಂಸ್ಕಾರಕ್ಕೆ ಅವಕಾಶ
ಸರ್ಪ ಸಂಸ್ಕಾರ, ಅಶ್ಲೇಷ ಬಲಿ ಸೇವೆಯಲ್ಲಿ ಒಮ್ಮೆ ಇಬ್ಬರಿಗೆ ಮಾತ್ರ ಅವಕಾಶ
ಮಹಾಪೂಜೆ, ಪಂಚಾಮೃತ ಸೇವೆಯ ಹತ್ತು ಟಿಕೆಟ್ ಮಾತ್ರ ವಿತರಣೆ
ಸರ್ಪ ಸಂಸ್ಕಾರ ಸೇವೆ ಸಲ್ಲಿಸುವವರಿಗೆ 2 ದಿನ ಕ್ಷೇತ್ರದ ವಸತಿ ಗೃಹದಲ್ಲಿ ತಂಗಲು ಅವಕಾಶ
ಇತರ ಸೇವೆ ನೀಡುವವರಿಗೆ ಒಂದೇ ದಿನ ತಂಗಲು ಅವಕಾಶ
ಬೆಳಿಗ್ಗೆ 6.30ರಿಂದ ಮಧ್ಯಾಹ್ನ 1.30ರ ತನಕ ಹಾಗೂ
ಮಧ್ಯಾಹ್ನದ ಬಳಿಕ 3.30ರಿಂದ 8 ಗಂಟೆ ತನಕ ಕ್ಷೇತ್ರ ತೆರೆದಿರುತ್ತದೆ