ಮಂಗಳೂರು, ಸೆ. 13 (DaijiworldNews/SM): ಕೊರೋನಾ ಲಾಕ್ ಡೌನ್ ನಿಂದಾಗಿ ಬಂದ್ ಆಗಿದ್ದ ಕಾಸರಗೋಡು-ದ.ಕ. ಜಿಲ್ಲೆಯ ಕೆಲವು ಗಡಿಗಳು ಸದ್ಯ ತೆರವಾಗುತ್ತಿವೆ. ಇದೀಗ ಬಾಕ್ರಬೈಲ್ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಂಗಳೂರು-ಮುಡಿಪು-ಬಾಕ್ರಬೈಲು-ವಿಟ್ಲಕ್ಕೆ ಸೋಮವಾರದಿಂದ ಖಾಸಗಿ ಬಸ್ ಸಂಚಾರ ಆರಂಭಗೊಳ್ಳಲಿದೆ.

ಆರಂಭಿಕ ಹಂತದಲ್ಲಿ ಕೆಲವು ಖಾಸಗಿ ಬಸ್ ಗಳು ಸಂಚಾರ ನಡೆಸಲಿವೆ. ಮುಂದೆ ಪ್ರಯಾಣಿಕರ ಬೇಡಿಕೆಗನುಗುಣವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಗಳು ಓಡಾಟ ನಡೆಸಲಿವೆ. ಕೊರೊನಾ ಕಾರಣದಿಂದ ಗಡಿ ಬಂದ್ ಹಿನ್ನೆಲೆ ಮುಡಿಪು- ಬಾಕ್ರಬೈಲು-ಸಾಲೆತ್ತೂರು ಮೂಲಕ ಸಂಚರಿಸುತ್ತಿದ್ದ ಬಸ್ಸುಗಳು ಸ್ಥಗಿತವಾಗಿದ್ದವು. ಬಸ್ ಸಂಚಾರವಿಲ್ಲದೆ, ಈ ಭಾಗದಲ್ಲಿದ್ದ ಜನತೆ ಸಂಕಷ್ಟ ಅನುಭವಿಸುತ್ತಿದ್ದರು. ಅಗತ್ಯ ಸೇವೆಗಳ ಲಭ್ಯತೆಗೆ ಪರದಾಡುತ್ತಿದ್ದರು. ಉದ್ಯೋಗ, ಆರೋಗ್ಯ ಸೇವೆ ಸೇರಿದಂತೆ ಇತರ ಅಗತ್ಯತೆಗಳಿಗೆ ಕೇರಳ ಗಡಿ ಭಾಗದವರು ಕರ್ನಾಟಕವನ್ನೇ ಅವಲಂಭಿಸಿದ್ದರು. ಆದರೆ, ಸಂಚಾರ ಬಂದ್ ಆಗಿದ್ದರಿಂದ ಪರದಾಡುವಂತಾಗಿತ್ತು.
ಗಡಿ ಮೂಲಕ ಸಂಚಾರಕ್ಕೆ ಅವಕಾಶ ನೀಡಬೇಕೆಂದು ನಿರಂತರ ಆಗ್ರಹಗಳನ್ನು ಇಲ್ಲಿನ ಸ್ಥಳೀಯರು ಮಾಡಿಕೊಳ್ಳುತ್ತಲೇ ಇದ್ದರೂ ಕೂಡ, ಸಂಚಾರಕ್ಕೆ ಅವಕಾಶ ಸಿಕ್ಕಿರಲಿಲ್ಲ. ಅಂತಿಮವಾಗಿ ಇದೀಗ ಈ ಭಾಗದಲ್ಲಿ ಖಾಸಗಿ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಪ್ರದೇಶದ ಜನರ ಮೊಗದಲ್ಲಿ ಮಂದಹಾಸ ಮೂಡಿದೆ.