ಮಂಗಳೂರು, ಮೇ 08: ಬಿಜೆಪಿ ಪಕ್ಷ ಹಬ್ಬಿಸುತ್ತಿರುವ ಅಪಪ್ರಚಾರಕ್ಕೆ ಕಿವಿಕೊಡಬಾರದು ಎಂದು ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದ್ದಾರೆ. ನಗರದಲ್ಲಿ ಮೇ 08 ರ ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಪಕ್ಷ ಚುನಾವಣಾ ಪ್ರಚಾರ ಬಿರುಸಿನಿಂದ ಸಾಗುತ್ತಿದೆ. ಇನ್ನೊಂದೆಡೆ ರಾಜ್ಯದಲ್ಲಿ ನಡೆದ ಚುನಾವಣಾ ಪೂರ್ವಸಮೀಕ್ಷೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಹಾಗೂ ಕರಾವಳಿಯಲ್ಲಿ ಮೇಲುಗೈ ಸಾಧಿಸುತ್ತದೆ ಎಂದು ವರದಿಯಾಗಿದೆ ಇದು ಪಕ್ಷಕ್ಕೆ ಇನ್ನಷ್ಟು ಬಲ ತುಂಬಿದೆ ಎಂದರು . ಜನರು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಆತ್ಮ ವಿಶ್ವಾಸವಿದ್ದು, ಕಳೆದ 5 ವರ್ಷಗಳಿಂದ ಮಾಡಿದ ಅಭಿವೃದ್ದಿ ಕೆಲಸಗಳು ಜನರಿಗೆ ಮತ ಹಾಕುವಂತೆ ಪ್ರೇರೇಪಿಸುತ್ತದೆ ಎಂದರು.
ಬಿಜೆಪಿ ಪಕ್ಷ ಅಪಪ್ರಚಾರವೇ ತಮ್ಮ ಶಕ್ತಿ ಎಂದು ಭಾವಿಸಿದ್ದಾರೆ. ಆದರೆ, ಸದಾ ಸುಳ್ಳು ಯಾವತ್ತೂ ಫಲ ನೀಡದು . ಕೋಮು ಸೂಕ್ಷ್ಮ ವಿಚಾರವನ್ನು ಕೆದಕಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಹವಣಿಸುತ್ತಿದೆ. ದ.ಕ.ಜಿಲ್ಲೆಯಲ್ಲಿ ನಡೆದ ಯಾವುದೇ ಮತೀಯ ಕೊಲೆ ಕೃತ್ಯಗಳಲ್ಲಿ ಕೂಡಾ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿಲ್ಲ. ಬಿಜೆಪಿ- ಸಂಘ ಪರಿವಾರ, ಎಸ್ಡಿಪಿಐ-ಪಿಎಫ್ಐಯವರೇ ಅದರಲ್ಲಿ ಭಾಗಿಯಾಗಿದ್ದಾರೆ ಎಂದು ರಮಾನಾಥ ರೈ ಆಪಾದಿಸಿದರು.
ಇದೇ ವೇಳೆ ಎಸ್ಡಿಪಿಐ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದೀರಾ? ಎಂಬ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವ ರೈ, ನಾವು ಯಾರೊಂದಿಗೂ ಒಳ ಒಪ್ಪಂದ ಮಾಡಿಕೊಂಡಿಲ್ಲ. ಆದರೆ ಎಲ್ಲಾ ಸಮುದಾಯದ ಮತಗಳು ನಮಗೆ ಬೇಕು ಎಂದರು
ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಎಐಸಿಸಿ ಮಾಜಿ ಕಾರ್ಯದರ್ಶಿ ಸಾನಿ ಮೋಳ್ ಉಸ್ಮಾನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ.ವೆಂಕಟೇಶ್, ಮೇಯರ್ ಭಾಸ್ಕರ ಮೊಯ್ಲಿ, ಇಬ್ರಾಹೀಂ ಕೋಡಿಜಾಲ್, ಕಣಚೂರು ಮೋನು, ಬೇಬಿ ಕುಂದರ್, ಸಂತೋಷ್ ಶೆಟ್ಟಿ ಕದ್ರಿ ಉಪಸ್ಥಿತರಿದ್ದರು.