ಉಡುಪಿ,ಸೆ. 14 (DaijiworldNews/MB) : ಕಳೆದ 12 ವರ್ಷಗಳಿಂದ ವಿವಿಧ ಸರ್ಕಾರಗಳಿಗೆ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ ಮಾದರಿಯಲ್ಲಿ ವೇತನ ಪರಿಷ್ಕರಣೆಗೆ ಹಾಗೂ ಇನ್ನಿತರ ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟು ಮನವಿ ಸಲ್ಲಿಸಿದ್ದು ಈಡೇರಿಸುವಂತೆ ಇಂದಿನವರೆಗೆ ಕಾಲಾವಕಾಶ ಕೊಟ್ಟಿದ್ದೇವೆ. ಆದರೆ ಸರಕಾರ ಬೇರೆ ಕ್ರಮ ತೆಗೆದುಕೊಂಡಿಲ್ಲ. ಹಾಗಾಗಿ ನಾಳೆ ಅಂದರೆ ಸೆಪ್ಟೆಂಬರ್ 15 ರಿಂದ ಹಂತ ಹಂತವಾಗಿ ಕೋವಿಡ್ ಮತ್ತು ಕೋವಿಡೇತರ ಸರಕಾರಕ್ಕೆ ಕೊಡುವ ವರದಿಯನ್ನು ಹಾಗೂ ಕೆಲವು ಸೇವೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ಹೆಚ್ ಪ್ರಕಾಶ್ ಕುಮಾರ್ ಶೆಟ್ಟಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.



ಇಂದು ನಗರದಲ್ಲಿ ಉಡುಪಿ ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕೆ ಗೋಷ್ಠಿಯಲ್ಲಿ ಮಾತನಾಡಿ, 'ನಾವು ಈಗಾಗಲೇ ಸಾಕಷ್ಟು ಮನವಿ ಮಾಡಿದ್ದೇವೆ. ವೈದ್ಯಕೀಯ ಶಿಕ್ಷಣ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರಿಗೆ 7 ನೇ ವೇತನ ಆಯೋಗದ ವೇತನ ಶ್ರೇಣಿ ನೀಡಲಾಗಿದೆ. ಆದರೆ ಸರಕಾರಿ ವೈದ್ಯರಿಗೆ ವೇತನ ಪರಿಷ್ಕರಣೆ ಆಗುತ್ತಿಲ್ಲ. ಸೆಪ್ಟೆಂಬರ್ 15 ರಿಂದ 20 ರವರೆಗೆ ಆನ್ ಲೈನ್ ಸಹಿತ ವರದಿ ನೀಡುವಿಕೆ, ಸರಕಾರಿ ಸಭೆಗಳಿಂದ ದೂರ ಉಳಿಯುತ್ತೇವೆ. ಮುಂದೆಯೂ ಸರಕಾರ ನಮ್ನ ಮನವಿಗೆ ಸ್ಪಂದಿಸಿದಿದ್ದರೆ ಸೆಪ್ಟೆಂಬರ್ 21 ರಿಂದ ತುರ್ತು ಸೇವೆ ಹೊರತು ಪಡಿಸಿ ಉಳಿದೆಲ್ಲಾ ಎಲ್ಕಾ ಸೇವೆ ಸ್ಥಗಿತಗೊಳಿಸುತ್ತೇವೆ. ಅಲ್ಲದೆ 22 ರಕ್ಕೆ ಬೆಂಗಳೂರು ಚಲೋ ಜಾಥ ಹಮ್ಮಿಕೊಂಡು ಬೆಂಗಳೂರಿನಲ್ಲಿ ಸರಕಾರಕ್ಕೆ ನಮ್ಮ ಹಕ್ಕೊತ್ತಾಯ ಮಾಡುತ್ತೇವೆ ಎಂದರು.
ಸರಕಾರಿ ಆಸ್ಪತ್ರೆ ವೇತನ ಕಡಿಮೆ ಇರುವುದರಿಂದಲೇ ಯುವ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾರೆ ಹಾಗಾಗಿ ಸರಕಾರಿ ವೈದ್ಯರ ಕೊರತೆ ಉಂಟಾಗಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಕಾರ್ಯದರ್ಶಿ ಡಾ ನರಸಿಂಹ ನಾಯಕ್, ಉಪಾಧ್ಯಕ್ಷ ಡಾ ಉಮೇಶ್ ನಾಯಕ್, ಡಾ ಗೋಪಾಲ ಎಸ್ ಜಿ, ರಂಜಿತ್, ಪ್ರತಾಪ್ ಕುಮಾರ್ ಉಪಸ್ಥಿತರಿದ್ದರು.