ಕಾರ್ಕಳ, ಮೇ 08 : ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕರ್ನಾಟಕದ ಪ್ರಚಾರಕ್ಕೆ ಬಂದರೆ ಯಾವುದೇ ಪರಿಣಾಮ ಇಲ್ಲ. ಅವರ ವರ್ಚಸ್ಸು ಉತ್ತರಪ್ರದೇಶದಲ್ಲೇ ಕುಗ್ಗಿದ್ದು, ಕರ್ನಾಟಕದಲ್ಲಿ ಅವರಿಂದಾಗುವ ಬದಲಾವಣೆ ಯಾವುದಿಲ್ಲ ಎಂದು ಮಾಜಿ ಸಂಸದ, ಮಾಜಿ ರಾಜ್ಯ ಸಭಾ ಸದಸ್ಯ ಹಾಗೂ ಹಿಂದಿ ಚಿತ್ರನಟ ರಾಜ್ಬಬ್ಬರ್ ಹೇಳಿದ್ದಾರೆ.
ಅವರು ಕಾಂಗ್ರೆಸ್ ಕಛೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಉತ್ತರ ಪ್ರದೇಶಲ್ಲಿ ಕೊಲೆ, ಸುಲಿಗೆ ಮತ್ತು ಅತ್ಯಾಚಾರ ತಾಂಡವಾಡುತ್ತಿದೆ. ಈ ಬಗ್ಗೆ ಅಲ್ಲಿನ ಸರಕಾರ ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಆದರೆ ಅಲ್ಲಿ ಕಾಂಗ್ರೆಸ್ನ ಶಾಸಕರ ಸಂಖ್ಯೆ ಕಡಿಮೆಯಿರುವ ಹಿನ್ನೆಲೆಯಲ್ಲಿ ನಮ್ಮ ಪ್ರತಿಭಟನೆ ಅವರಿಗೆ ಕೇಳುವುದಿಲ್ಲ. ಬಿಜೆಪಿ ಶಾಸಕರ ಕರ್ಮಕಾಂಡಗಳನ್ನು ಹತ್ತಿಕ್ಕುವ ಸಾಮರ್ಥ್ಯ ಆ ಸಿಎಂಗೆ ಇಲ್ಲ ಎಂದರು.
ಕರ್ನಾಟಕ ಮಾದರಿ :
ಕರ್ನಾಟಕದ ಸಿದ್ದರಾಮಯ್ಯನವರ ಸರಕಾರ ಇಡೀ ದೇಶಕ್ಕೆ ಮಾದರಿ. ಯಾವುದೇ ಭ್ರಷ್ಟಚಾರವಿಲ್ಲದೆ ನೀಡಿದ ಆಡಳಿತದ ಬಗ್ಗೆ ಬಿಜೆಪಿಗೆ ಕಳವಳವಿದೆ. ಈ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಸಿದ್ದರಾಮಯ್ಯನವರ ನಡುವೆ ನೇರ ಫೈಟ್ ಹೊರತು, ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಲೆಕ್ಕಕ್ಕಿಲ್ಲ ಎಂದರು. ಈಗಾಗಲೇ ಸಿಎಂ ನೀಡಿರುವ ಅನ್ನಭಾಗ್ಯ, ಕ್ಷೀರ ಭಾಗ್ಯದಂತಹ ನೂರಾರು ಜನಪರ ಯೋಜನೆಗಳು ಬಿಜೆಪಿ ಆಡಳಿತವಿರುವ ಇನ್ನಿತರ ರಾಜ್ಯಗಳಲ್ಲಿ ಏಕೆ ಅನುಷ್ಟಾನಗೊಂಡಿಲ್ಲ ಎಂದು ಪ್ರಶ್ನಿಸಿದರು. ಮೀನುಗಾರರಿಗೆ ಡೀಸೆಲ್ ಮತ್ತು ಸೀಮೆಎಣ್ಣೆ ಸಬ್ಸಿಡಿಯಲ್ಲಿ ಒದಗಿಸುತ್ತಿರುವುದು ಕೂಡಾ ಮಹಾನ್ ಸಾಧನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎಚ್.ಗೋಪಾಲ ಭಂಡಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವ, ಕಾರ್ಯದರ್ಶಿ ಭರತ್ ಮುಂಡೋಡಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಉದಯ ಶೆಟ್ಟಿ ಮುನಿಯಾಲು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಕೋಟ್ಯಾನ್, ವಕ್ತಾರ ಬಿಪಿನ್ಚಂದ್ರಪಾಲ್ ನಕ್ರೆ, ಕಾಂಗ್ರೆಸ್ ಪ್ರಮುಖರಾದ ಕೆ.ಎಸ್.ಇಮ್ತಿಯಾಜ್ ಅಹ್ಮದ್, ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ಗೆ ಸೇರ್ಪಡೆಗೊಂಡ ಆರೀಫ್ ಕಲ್ಲೊಟ್ಟೆ ಅವರನ್ನು ರಾಜ್ಬಬ್ಬರ್ ಅಭಿನಂದಿಸಲಾಯಿತು.