ಉಡುಪಿ, ಸೆ. 14 (DaijiworldNews/SM): ಡ್ರಗ್ಸ್ ಪ್ರಕರಣ ರಾಜ್ಯದಲ್ಲಿ ಭಾರೀ ಸಂಚಲನವನ್ನುಂಟು ಮಾಡಿದ್ದು, ಇದರ ವಿರುದ್ಧ ಇದೀಗ ಉಡುಪಿಯಲ್ಲೂ ಕಾರ್ಯಾಚರಣೆ ಶುರುವಾಗಿದೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಸ್ವತಃ ಫೀಲ್ಡಿಗಿಳಿದು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಸಂಚಾರಿ ನಿಯಮ ಉಲ್ಲಂಗಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಡ್ರಗ್ಸ್ ತಪಾಸಣೆಯ ಜೊತೆಗೆ ಸಂಚಾರಿ ನಿಯಮ ಉಲ್ಲಂಘಿಸಿದವರಿಗೂ ಸೂಕ್ತ ದಂಡ ವಿಧಿಸಿ ಎಚ್ಚರಿಕೆ ನೀಡಲಾಗುತ್ತಿದೆ.

ನಗರದಲ್ಲಿ ಪೊಲೀಸರು ಹೈ ಬೀಮ್ ಲೈಟ್ಸ್, ಹೆಲ್ಮೆಟ್ ಧರಿಸದೆ ಸಂಚಾರ, ಕಲರ್ ಲೈಟ್ಸ್, ಡಿಎಲ್ ಮುಂತಾದುವುಗಳನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿದವರ ಮೇಲೆ 80 ಪ್ರಕರಣಗಳು ಹಾಗೂ 40 ಸಾವಿರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಈ ಪೈಕಿ ನಗರ ಠಾಣೆಯಲ್ಲೇ 35 ಕೇಸುಗಳು ಹಾಗೂ 25 ಸಾವಿರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
ಎಸ್ಪಿ ನೇತೃತ್ವದ ತಂಡ ನಗರದ ಪ್ರಮುಖ ಪ್ರದೇಶಗಳಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ. ಉಡುಪಿಯ ಪ್ರಮುಖ ರಸ್ತೆಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಕಲ್ಸಂಕ ಸರ್ಕಲ್, ಅಂಬಾಗಿಲು ಜಂಕ್ಷನ್, ಮಣಿಪಾಲ, ಇಂದ್ರಾಳಿ , ಸಿಟಿ ಬಸ್ ಸ್ಟ್ಯಾಂಡ್ ನಲ್ಲಿ ಬಿಗಿ ಪೋಲಿಸ್ ತಪಾಸಣೆ ನಡೆಸಲಾಗುತ್ತಿದ್ದು, ವಾಹನಗಳನ್ನು ಪರಿಶೀಲಿಸಿದ ಬಳಿಕವಷ್ಟೇ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಾಚರಣೆ ನಡೆಸುವಂತೆ ಪೊಲೀಸ್ ವರಿಷ್ಠಾಹಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಉಡುಪಿ ಟ್ರಾಫಿಕ್ ಎಸ್ ಐ ಅಬ್ದುಲ್ ಖಾದರ್, ಟೌನ್ ಎಸ್ ಐ ಸಕ್ತಿವೇಲು, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಡಿವೈಎಸ್ಪಿ ಜೈ ಶಂಕರ್ ಇತರ ಪೋಲಿಸ್ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.