ಕುಂದಾಪುರ, ಮೇ 09 : ಕ್ಷೇತ್ರದಲ್ಲಿ ಅಗತ್ಯವಿರುವ ಎಲ್ಲಾ ಮೂಲಭೂತ ಅಗತ್ಯಗಳನ್ನು ಪೂರೈಸುವ ಕೆಲಸ ಮಾಡಿದ್ದೇನೆ. ಬೇರೆ ಬೇರೆ ಕ್ಷೇತ್ರದ ಶಾಸಕರು ಸಾವಿರಾರು ಕೋಟಿ ಅಭಿವೃದ್ದಿ ಕೆಲಸ ಮಾಡಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದು, ಅದರ ನಿಜಾಂಶವೆಂದರೆ ಸರ್ಕಾರ ಅನ್ನಭಾಗ್ಯ, ಎನ್.ಎಚ್.,ಬಸವ ವಸತಿ ಯೋಜನೆ, ಶಾಲಾ ಕೊಠಡಿ ನಿರ್ಮಾಣ, ಅಂಗನವಾಡಿ ಕಟ್ಟಡ ನಿರ್ಮಾಣ, ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಹೀಗೆ ಎಲ್ಲವನ್ನು ಸೇರಿಸಿಕೊಂಡಿದ್ದಾರೆ. ಹಾಗೆಯೇ ಸೇರಿಸಿಕೊಂಡರೆ ನನ್ನ ಕ್ಷೇತ್ರದಲ್ಲಿ ವಾರಾಹಿ ಯೋಜನೆಯದ್ದೆ 500 ಕೋಟಿ ಇದೆ. ನಾನು ಅದನ್ನೆಲ್ಲ ಹೊರತು ಪಡಿಸಿ ಕೇವಲ ಶಾಸಕರ ಮೂಲಕ ಅನುಷ್ಠಾನವಾದ ಕಾಮಗಾರಿಗೆ ಬಳಕೆಯಾದ ಅನುದಾನದ ವಿವರವನ್ನು ಮಾತ್ರ ಉಲ್ಲೇಖಿಸಿದ್ದು 48269.32 ಲಕ್ಷ ಅಭಿವೃದ್ದಿ ಕಾರ್ಯ ಕ್ಷೇತ್ರದಲ್ಲಿ ಆಗಿದೆ ಎಂದು ಕುಂದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.
ಅವರು ಕುಂದಾಪುರ ಬಿಜೆಪಿ ಕಛೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. ಕ್ಷೇತ್ರದಲ್ಲಿ ಅಭಿವೃದ್ದಿ ಆಗಿಲ್ಲ ಎಂದು ಜನಸಾಮಾನ್ಯರು ಹೇಳುತ್ತಿಲ್ಲ. ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ. ಕ್ಷೇತ್ರದಲ್ಲಿ ಅಭಿವೃದ್ದಿ ಆಗಿಲ್ಲ ಎನ್ನುವವರಿಗೆ ಕ್ಷೇತ್ರದ ಗ್ರಾಮವೇ ಗೊತ್ತಿಲ್ಲ ಎಂದರು.
ಕಳೆದ ಬಾರಿಯ ಅಂತರಕ್ಕಿಂತ ಹೆಚ್ಚು ಅಂತರ ಈ ಬಾರಿ ಬರಲಿದೆ. ಕ್ಷೇತ್ರದ ಜನತೆಗೆ ಸಮಾನವಾಗಿ ಸಾಮಾಜಿಕ ನ್ಯಾಯ ನೀಡಿದ್ದೇನೆ ಎಂದರು. ಕ್ಷೇತ್ರದಲ್ಲಿ ಬಿಜೆಪಿಗರ ಅಸಮಾಧಾನದ ವಿಚಾರದ ಬಗ್ಗೆ ಸುದ್ಧಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಅಸಮಾಧಾನಗೊಂಡವರನ್ನು ಪಕ್ಷದ ಪ್ರಮುಖರು ಕರೆದು ಮಾತನಾಡಿದ್ದಾರೆ. ಎಲ್ಲಾ ಹೇಳುವಂತೆ ಫಿಲ್ಲರ್ ಮುರಿದುಹೋಗುವಂತ ಭಿನ್ನಮತ ಇಲ್ಲ ಸಣ್ಣ ಬಿರುಕು ಅಷ್ಟೆ. ಅದು ಅಪಾಯಕಾರಿಯಾಗುವ ಹಂತ ತಲುಪಿಲ್ಲ. ಯಾರು ಹತಾಸರಾಗುತ್ತಾರೆ ಎನ್ನುವುದು ಮೇ.15 ಕ್ಕೆ ಗೊತ್ತಾಗುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ನಾವೀಗ ಪ್ರಚಾರದ ಅಂತಿಮ ಹಂತದಲ್ಲಿದ್ದೇವೆ. ಜಿಲ್ಲೆಯ 5 ಕ್ಷೇತ್ರಗಳಲ್ಲಿಯೂ ಒಳ್ಳೆಯ ವಾತಾವರಣವಿದೆ. ಐದು ಕ್ಷೇತ್ರವನ್ನು ಗೆಲ್ಲುವ ವಿಶ್ವಾಸವಿದೆ. ಕುಂದಾಪುರದಲ್ಲಿ ಹಾಲಾಡಿಯವರ ವೈಯಕ್ತಿಕ ವರ್ಚಸ್ಸು, ಮೋದಿ ಅಲೆ, ಬಿಜೆಪಿಯ ಒಟ್ಟು ಅಂಶಗಳಿಂದ ನಿರೀಕ್ಷಿತ ಗೆಲುವು ನಮ್ಮದಾಗಲಿದೆ. ರಾಜ್ಯದಲ್ಲಿ 150 ಸ್ಥಾನಗಳನ್ನು ಗೆದ್ದು, ಅಧಿಕಾರ ಹಿಡಿಯುತ್ತೇವೆ ಎಂದರು.
ಜಯಪ್ರಕಾಶ್ ಹೆಗ್ಡೆ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಿಲ್ಲ ಏಕೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರನ್ನು ಪೋನ್ ಮೂಲಕ ಸಂಪರ್ಕಿಸಿದ್ದೇನೆ ಅವರು ಬೆಸ್ಟ್ ಆಪ್ ಲಕ್ ಹೇಳಿ ಥ್ಯಾಂಕ್ಸ್ ಎಂದು ಹೇಳಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ಮಂಡಲದ ಅಧ್ಯಕ್ಷರಾದ ಸುರೇಶ ಶೆಟ್ಟಿ ಕಾಡೂರು, ಜಿಪಂ ಸದಸ್ಯರಾದ ರಾಘವೇಂದ್ರ ಕಾಂಚನ್, ಪ್ರತಾಪ್ ಹೆಗ್ಡೆ ಮಾರಾಳಿ, ಲಕ್ಷ್ಮೀ ಮಂಜು ಬಿಲ್ಲವ, ಶ್ರೀಲತಾ ಸುರೇಶ ಶೆಟ್ಟಿ, ಸುಪ್ರಿತಾ ಕುಲಾಲ್, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಭಾಸ್ಕರ ಬಿಲ್ಲವ, ಶಂಕರ ಅಂಕದಕಟ್ಟೆ, ಪಕ್ಷದ ಮುಖಂಡರಾದ ಮೋಹನದಾಸ ಶೆಣೈ, ಸತೀಶ ಶೆಟ್ಟಿ, ಭರತ್ ಶೆಟ್ಟಿ, ಮಂಜು ಬಿಲ್ಲವ, ಸದಾನಂದ ಬಳ್ಕೂರು, ಯುವ ಮೋರ್ಚಾ ಅಧ್ಯಕ್ಷ ಸತೀಶ ಪೂಜಾರಿ, ಉದ್ಯಮಿ ರಾಘವೇಂದ್ರ ರಾವ್ ನೇರಂಬಳ್ಳಿ ಉಪಸ್ಥಿತರಿದ್ದರು.