ಮಂಗಳೂರು, ಸೆ. 15 (DaijiworldNews/MB) : ವಿಧಾನಸಭೆ ಅಧಿವೇಶನ ಸೆಪ್ಟೆಂಬರ್ 21 ರಂದು ಪ್ರಾರಂಭವಾಗಲಿದ್ದು, ಎಂಟು ದಿನಗಳವರೆಗೆ ನಡೆಯಲಿದೆ. ಎಲ್ಲಾ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಎಂಟು ದಿನಗಳು ಸಾಕಾಗುವುದಿಲ್ಲ ಎಂದು ಮಾಜಿ ಆರೋಗ್ಯ ಸಚಿವ, ಶಾಸಕ ಯು ಟಿ ಖಾದರ್ ಅವರು ಹೇಳಿದ್ದಾರೆ.



"ಸೆಪ್ಟೆಂಬರ್ 21 ರಂದು ಪ್ರಾರಂಭವಾಗುವ ಎಂಟು ದಿನಗಳ ವಿಧಾನಸಭೆ ಅಧಿವೇಶನದಲ್ಲಿ ಅಗತ್ಯ ಚರ್ಚೆಗಳಿಗೆ ಅವಧಿ ಸಾಕಾಗುವುದಿಲ್ಲ. ಎಂಟು ದಿನಗಳಲ್ಲಿ, ದಿವಂಗತ ತುಮಕೂರು ಜಿಲ್ಲಾ ಶಾಸಕರಿಗೆ ಗೌರವ ಸಲ್ಲಿಸಲು ಒಂದು ದಿನವನ್ನು ಕಾಯ್ದಿರಿಸಲಾಗಿದೆ. ಈಗ ಕೊರೊನಾ, ಡ್ರಗ್ಸ್, ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು, ಪ್ರವಾಹ ಸೇರಿ ರಾಜ್ಯದ ಹಲವು ಗಂಭೀರ ವಿಷಯಗಳನ್ನು ಚರ್ಚಿಸಬೇಕಿದೆ. ಸರ್ಕಾರದ ಹೊಸ ಯೋಜನೆಗಳ ಬಗ್ಗೆಯೂ ಚರ್ಚಿಸಬೇಕಾಗಿದೆ ಎಂದು ಹೇಳಿದ ಅವರು, ಈ ಅಧಿವೇಶನವನ್ನು ಬರೀ ಹೆಸರಿಗಾಗಿ ನಡೆಸಲಾಗುತ್ತಿದೆ. ಯಾವುದೇ ನಿಗದಿತ ಗುರಿಯನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
ಅಧಿವೇಶನದಲ್ಲಿ ಭೂ ಸುಧಾರಣೆ ಕಾಯ್ದೆ ಬಗ್ಗೆಯೂ ಚರ್ಚಿಸಬೇಕಾಗಿದೆ. ಆದರೆ ಸರ್ಕಾರ ಅವುಗಳನ್ನು ತಪ್ಪಿಸುತ್ತಿದೆ ಎಂದು ಸರ್ಕಾರದ ವಿರುದ್ದ ಗಂಭೀರ ಆರೋಪ ಮಾಡಿದರು.
ಕಾನೂನು ವಿಧಾನಗಳ ಮೂಲಕ ಮರಳುಗಾರಿಕೆ ನಡೆಸಲು, ಸಕ್ರಮ ಮರಳು ವ್ಯಾಪಾರಕ್ಕೆ ಉತ್ತೇಜನ ನೀಡುವ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಅಭಿವೃದ್ಧಿಪಡಿಸಿದ ವಿಶೇಷ ಆ್ಯಪ್ ಬಳಕೆಯನ್ನು ಪ್ರಸ್ತುತ ಸರ್ಕಾರ ಉದ್ದೇಶಪೂರ್ವಕವಾಗಿ ತ್ಯಜಿಸಿದೆ ಎಂದು ಖಾದರ್ ಅವರು ಆರೋಪಿಸಿದ್ದಾರೆ.
"ಕಾಂಗ್ರೆಸ್ ಅವಧಿಯಲ್ಲಿ ಅಗತ್ಯವಿರುವವರಿಗೆ ಮರಳು ಒದಗಿಸಲು ವಿಶೇಷ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದರೊಂದಿಗೆ ಅಕ್ರಮ ಮರಳುಗಾರಿಕೆಗೆ ಬ್ರೇಕ್ ಹಾಕುವ ಉದ್ದೇಶವನ್ನು ಕಾಂಗ್ರೆಸ್ ಹೊಂದಿತ್ತು. ಮರಳು ಅಗತ್ಯವಿರುವವರಿಗೆ ಆ್ಯಪ್ ಮುಖೇನ ಕಾನೂನು ವಿಧಾನದ ಮೂಲಕ ಪಡೆಯಲು ಪ್ರೋತ್ಸಾಹಿಸಲಾಯಿತು. ಆದರೆ ಪ್ರಸ್ತುತ ಬಿಜೆಪಿ ಸರ್ಕಾರವು ಅದನ್ನು ಉತ್ತೇಜಿಸುವುದಿಲ್ಲ. ಆದ್ದರಿಂದ, ಮರಳು ಅಗತ್ಯವಿರುವವರು ಪಡೆಯಲು ಸಾಧ್ಯವಾಗುತ್ತಿಲ್ಲ. ಯಾವುದೇ ಪರ್ಯಾಯ ದಾರಿ ಇಲ್ಲದೆ ಜನರು ಅಕ್ರಮ ಮಾರ್ಗಗಳ ಮೂಲಕ ಮರಳನ್ನು ಖರೀದಿಸುತ್ತಾರೆ. ಈ ರೀತಿಯಾಗಿ, ಪ್ರಸ್ತುತ ಸರ್ಕಾರವು ಅಕ್ರಮ ಮರಳು ವ್ಯಾಪಾರವನ್ನು ಉತ್ತೇಜಿಸುತ್ತಿದೆ. ಅದಕ್ಕಾಗಿ ಅಪ್ಲಿಕೇಶನ್ನ ನಿಲ್ಲಿಸಲಾಗಿದೆ ಎಂದು ದೂರಿದರು.