ಮಂಗಳೂರು , ಮೇ 09: ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಸರಕಾರದ ಆಡಳಿತಾವಧಿಯಲ್ಲಿ ಅಭಿವೃದ್ಧಿಯ ಸೂಚ್ಯಂಕದಲ್ಲಿ ಏರಿಕೆಯಾಗಿದೆ. ರಾಜ್ಯದ ಜನರ ಜೀವನ ಮಟ್ಟದಲ್ಲಿಯೂ ಸುಧಾರಣೆಯಾಗಿದೆ. ನಿರುದ್ಯೋಗ ಸಮಸ್ಯೆ ದೇಶದ ಇತರ ರಾಜ್ಯಗಳಿಂತ ಶೇಕಾಡವಾರು ಕಡಿಮೆ ಇದೆ. ಇದು ಅಭಿವೃದ್ಧಿಯ ಸಂಕೇತ. ಇದೇ ಕಾರಣಕ್ಕಾಗಿ ಈ ಬಾರಿಯೂ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ,ಅಭಿವೃದ್ದಿ ಕೆಲಸಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ನ ಹಿರಿಯ ನಾಯಕ ಪಿ. ಚಿದಂಬರಂ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.
ಅವರು ನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ, ಮೇ 09 ರ ಬುಧವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದ್ದ ಅವಧಿಯಲ್ಲಿ ಅವರು ಮಾಡಿರುವ ಅಭಿವೃದ್ದಿ ಕೆಲಸಗಳ ಕೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಳೆದ 5 ವರ್ಷ ಕಾಲ ಸಿದ್ದರಾಮಯ್ಯನವರ ಆಡಳಿತದ ನ್ಯೂನ್ಯತೆಗಳನ್ನೇ ಹುಡುಕುವುದರಲ್ಲಿಯೇ ಕಾಲ ಕಳೆಯುತ್ತಿದೆ ಎಂದು ಪಿ. ಚಿದಂಬರಂ ಆರೋಪಿಸಿದರು.
ಅಲ್ಲದೆ ಕರಾವಳಿಯಲ್ಲಿ ಧರ್ಮದ ಆಧಾರದಲ್ಲಿ ಧ್ರುವೀಕರಣ ಮಾಡಿ, ಮತೀಯ ದ್ವೇಷ ಬಿತ್ತುವ ಕೆಲಸ ಆರ್ಎಸ್ಎಸ್ ಮತ್ತು ಬಿಜೆಪಿ ಮಾಡುತ್ತಿದೆ. ಕೋಮುಗಲಭೆ ಹಾಗೂ ಕೊಲೆಗಳಿಗೆ ದಾರಿ ಮಾಡುತ್ತಿದೆ' ಎಂದರು.
ಅಲ್ಲದೆ ದೇಶದಲ್ಲಿ ನರೇಂದ್ರ ಮೋದಿ ಅಲೆಯೇ ಇಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಹಲವು ರಾಜ್ಯಗಳಲ್ಲಿ ಬಿಜೆಪಿ ಸೋತಿದೆ. ಕರ್ನಾಟಕದಲ್ಲೂ ಸೋಲು ಖಚಿತ ಎಂದರು.
ಏಕರೂಪದ ತೆರಿಗೆಯನ್ನು ಹಿಂದೆ ಇದ್ದ ಯುಪಿಎ ಸರಕಾರ ಜಾರಿಗೊಳಿಸಲು ಮುಂದಾದಾಗ ಇದೇ ಬಿಜೆಪಿಯವರು ಅದನ್ನು ತಡೆದಿದ್ದರು. ಇದೀಗ ಜಾರಿಗೆ ಬಂದಿರುವ ಜಿಎಸ್ಟಿ ಅವೈಜ್ಞಾನಿಕವಾಗಿದ್ದು, ಗಬ್ಬರ್ಸಿಂಗ್ಕಿ ಟ್ಯಾಕ್ಸ್ ಎಂದವರು ಲೇವಡಿ ಮಾಡಿದರು.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದರೆ ತಾವು ಪ್ರಧಾನಿ ಆಗುವುದಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿರುವುದರಲ್ಲಿ ತಪ್ಪೇನೂ ಇಲ್ಲ. ಕಾಂಗ್ರೆಸ್ ಬಹುಮತ ಪಡೆದಾಗ ಪ್ರಧಾನಿ ಯಾರು ಆಗುತ್ತಾರೆ ಎಂಬುದನ್ನು ಕಾಂಗ್ರೆಸ್ ಪಕ್ಷ ನಿರ್ಧರಿಸುತ್ತದೆ. ಮೋದಿ ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ವಕ್ತಾರ ಜೈವೀರ್ ಶೆರ್ಗಿಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ. ವೆಂಕಟೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಸದಾಶಿವ ಉಳ್ಳಾಲ್, ಇಬ್ರಾಹೀಂ ಕೋಡಿಜಾಲ್ ಉಪಸ್ಥಿತರಿದ್ದರು.