ಮಂಗಳೂರು, ಮೇ 9: ಮೇ 12 ರಂದು ಜಿಲ್ಲೆಯಲ್ಲಿ ಮತದಾರರು ಶಾಂತಿಯುತವಾಗಿ ಮತ ಚಲಾಯಿಸಲು ಬೇಕಾದ ಸಕಲ ಸಿದ್ಧತೆಯನ್ನು ಜಿಲ್ಲಾ ಪೊಲೀಸ್ ಇಲಾಖೆ ಮಾಡಿಕೊಂಡಿವೆ ಎಂದು ಎಸ್ಪಿ ರವಿಕಾಂತೇಗೌಡ ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮೇ.09 ರ ಬುಧವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ, ಅವರು ನಿರ್ಭೀತಿಯಿಂದ ಮತದಾರರು ಮತ ಚಲಾವಣೆ ಮಾಡುವಂತೆ ಮನವಿ ಮಾಡಿದ್ದಾರೆ.
ನೀತಿ ಸಂಹಿತೆ ಜಾರಿಗೆ ಬಂದ ನಂತರ ಇಲಾಖೆಯು ಚುನಾವಣೆಗಾಗಿ ಸಕಲ ರೀತಿಯಲ್ಲೂ ್ತಯಾರಿ ನಡೆಸಿದೆ. ಜಿಲ್ಲಾ ಪೊಲೀಸ್ ಇಲಾಖೆಯ ವ್ಯಾಪ್ತಿಯಲ್ಲಿ 981 ಮತಗಟ್ಟೆಗಳಿದ್ದು, ಇದರ ಬಂದೋಬಸ್ತ್ಗಾಗಿ ಡಿವೈಎಸ್ಪಿ ಹುದ್ದೆಯ ಅಧಿಕಾರಿಗಳಲ್ಲದೆ 870 ಹೆಡ್ಕಾನ್ಸ್ಟೇಬಲ್ ಮತ್ತು ಪೊಲೀಸ್ ಪೇದೆಗಳು ಕರ್ತವ್ಯದಲಿದ್ದಾರೆ. ಇದರೊಂದಿಗೆ 330 ಗೃಹರಕ್ಷಕ ದಳದ ಸಿಬ್ಬಂದಿ, 20 ಅರಣ್ಯ ರಕ್ಷಣಾ ಸಿಬ್ಬಂದಿ, 1400 ಅರೆ ಸೇನಾ ಪಡೆ ಸಹಿತ ಸುಮಾರು 3 ಸಾವಿರಕ್ಕೂ ಹೆಚ್ಚು ಮಂದಿ ಬಂದೋಬಸ್ತ್ ನಡೆಸುತ್ತಿದ್ದಾರೆ ಎಂದರು.
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ 64 ಮತಗಟ್ಟೆಗಳಿದ್ದು, ಇಂತಹ ಜಾಗಗಳಲ್ಲಿ ಅರೆಸೇನಾ ಪಡೆ ಬಳಸಲಾಗುತ್ತದೆ. ಇದಲ್ಲದೆ ಪೂರ್ವ ತಯಾರಿಯಾಗಿ ನಕ್ಸಲ್ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿಯೊಂದಿಗೆ 2 ಬಾರಿ ಭೇಟಿ ನೀಡಿ ಅಲ್ಲಿನ ಮತದಾರರೊಂದಿಗೆ ಮಾತುಕತೆ ನಡೆಸಿದ್ದು, ಅವರೆಲ್ಲಾ ನಿರ್ಭೀತಿಯಿಂದ ಮತ ಚಲಾಯಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ರವಿಕಾಂತೇಗೌಡ ಹೇಳಿದರು
ಜಿಲ್ಲೆಯ ಗಡಿ ಭಾಗಗಳಲ್ಲಿ 23 ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದ್ದು, ಅಲ್ಲಿ ಸಿಸಿ ಟಿವಿಗಳ ಕಣ್ಗಾವಲು, ಕೇಂದ್ರೀಯ ಭಧ್ರತಾ ಪಡೆಗಳ ಯೋಧರನ್ನು ನಿಯೋಜಿಸಲಾಗಿದೆ. ಜಿಲ್ಲೆ ಆಗಮಿಸುವ ಎಲ್ಲಾ ವಾಹನ ಹಾಗೂ ಅಪರಿಚಿತ ವ್ಯಕ್ತಿಗಳ ಚಲನಾವಲನಗಳ ಮೇಲೆ ನಿಗಾ ಇರಿಸಲಾಗಿದೆ ಎಂದರು