ಮೂಡುಬಿದಿರೆ, ಮೇ 09 : ಮಾನಸಿಕವಾಗಿ ಹಿಂಸೆ ನೀಡಿ ಆತ್ಯಹತ್ಯೆಗೆ ಪ್ರಚೋದನೆ ನೀಡುವ ಮೂಲಕ ಗೃಹಿಣಿಯೋರ್ವಳ ಸಾವಿಗೆ ಕಾರಣೀಕರ್ತರಾಗಿರುವ ಮೂವರು ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಕೇರಳದ ಕಾಂಞಗಾಡಿನಲ್ಲಿ ನಿನ್ನೆ ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳನ್ನು ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಗಂಟಾಲ್ಕಟ್ಟೆಯ ನೀರಲ್ಕೆ ನಿವಾಸಿ ಅಸ್ಲಾಂ, ರಮೀಝ್ ಅಡ್ಡೂರು ಹಾಗೂ ಮಹಮ್ಮದ್ ಹ್ಯಾರೀಸ್ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿ ಉಮರಬ್ಬ ತಲೆಮರೆಸಿಕೊಂಡಿದ್ದಾರೆ.
ಪ್ರಕರಣದ ಹಿನ್ನಲೆ : ಏ.11ರಂದು ಕಲ್ಲಬೆಟ್ಟು ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ಗಂಟಾಲ್ಕಟ್ಟೆಯ ನೀರಲ್ಕೆ ನಿವಾಸಿ ಅಸ್ಲಾಂ ಅವರ ಪತ್ನಿ ಕೈರುನ್ನೀಸಾ (22) ರೂಮಿನ ಪಕ್ಕಾಸಿಗೆ ಚೂಡಿದಾರದ ಶಾಲಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಸಂದರ್ಭದಲ್ಲಿ ಆಕೆಯ ಗಂಡ ಮತ್ತು ಮಾವ ಉಮರಬ್ಬ ನಾಪತ್ತೆಯಾಗಿದ್ದಲ್ಲದೆ, ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದರಿಂದ ಹಲವು ಸಂಶಯಗಳಿಗೆ ಕಾರಣವಾಗಿತ್ತು.
ಇದೀಗ ಆರೋಪಿಗಳನ್ನು ಪೊಲೀಸರು ಆರೋಪಿಗಳನ್ನು ಕೇರಳದಲ್ಲಿ ಬಂಧಿಸಿ ಮೂಡುಬಿದಿರೆಗೆ ಕರೆದುಕೊಂಡು ಬಂದು ತನಿಖೆ ಆರಂಭಿಸಿದ ಸಂದರ್ಭದಲ್ಲಿ ಕೈರುನ್ನೀಸಾಳ ಗಂಡ ಅಸ್ಲಾಂ, ನಾದಿನಿಯ ಗಂಡ ರಮೀಝ್ ಅಡ್ಡೂರು ಅಸ್ಲಾಂನ ಚಿಕ್ಕಪ್ಪನ ಮಗ ಮಹಮ್ಮದ್ ಹ್ಯಾರೀಸ್ ಹಾಗೂ ಮಾವ ಉಮರಬ್ಬ ಅವರು ಕೈರುನ್ನಿಸಾಳಿಗೆ ಮಾನಸಿಕವಾಗಿ ಹಿಂಸೆ ನೀಡಿ ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡಿರುವುದಾಗಿ ಬಾಯ್ಬಿಟ್ಟಿದ್ದಾರೆ.
ಬಂಟ್ವಾಳ ಅಮ್ಮುಂಜೆಯ ನಿವಾಸಿ ಕೈರುನ್ನೀಸಾರನ್ನು ಅಸ್ಲಾಂ ಕಳೆದ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದು ಎರಡೂವರೆ ವರ್ಷದ ಒಂದು ಹೆಣ್ಣು ಮಗುವಿದೆ. ಅಸ್ಲಾಂ ವಾಹನದಲ್ಲಿ ಹಣ್ಣು ತರಕಾರಿ ಮಾರಾಟ ಮಾಡುವ ವ್ಯಾಪಾರ ಮಾಡುತ್ತಿದ್ದನು.
ಮೂಡುಬಿದಿರೆ ಪೊಲೀಸ್ ನಿರೀಕ್ಷಕ ವಿಜಯ ಪ್ರಸಾದ್ ಅವರ ಆದೇಶದಂತೆ ಉಪನಿರೀಕ್ಷಕ ದೇಜಪ್ಪ ನೇತೃತ್ವದಲ್ಲಿ ಅಪರಾಧ ವಿಭಾಗದ ಪೊಲೀಸರಾದ ಮಹಮ್ಮದ್ ಮನ್ಸೂರ್, ಚಂದ್ರಹಾಸ್, ಅಖಿಲ್ ಮತ್ತು ಸಂತೋಷ್ ಅವರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.