ಬಂಟ್ವಾಳ, ಮೇ 9: "ಬಂಟ್ವಾಳ ಕ್ಷೇತ್ರದಲ್ಲಿ ನನಗೆ ಹಿಂದೂಗಳ ಮತ ಬೇಡವೆಂದು ತಾನು ಎಲ್ಲಿಯೂ ಹೇಳಲಿಲ್ಲ. ಆದರೆ ಬಿಜೆಪಿ ಮುಖಂಡರು ನನ್ನ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಸಚಿವ ರಮಾನಾಥ ರೈ ಹೇಳಿದ್ದಾರೆ.
ಬುಧವಾರ ಬಿ.ಸಿ.ರೋಡಿನಲ್ಲಿರುವ ಪಕ್ಷದ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಭಾವನಾತ್ಮಕವಾಗಿ ಮಾತನಾಡಿದ ಅವರು, "ಬಿಜೆಪಿಗೆ ಪ್ರಚಾರ ಮಾಡಲು ಯಾವುದೇ ವಿಷಯಗಳಿಲ್ಲ. ಅದಕ್ಕಾಗಿ ಈ ರೀತಿಯ ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಜನರ ದಾರಿತಪ್ಪಿಸುತ್ತಿದ್ದಾರೆ. ತಾನು ಬಂಟ್ವಾಳ ಕ್ಷೇತ್ರದ ಪುಣ್ಯ ಕ್ಷೇತ್ರಗಳಿಗೆ ಬಂದು ಆಣೆ ಪ್ರಮಾಣ ಮಾಡುತ್ತೇನೆ. ಈ ಬಗ್ಗೆ ಬಿಜೆಪಿಯವರು ಸಾಕ್ಷಿ ಸಮೇತ ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.
ಜಿಲ್ಲೆಯಲ್ಲಿ ಅಭಿವೃದ್ಧಿಯ ವಿಚಾರವನ್ನಿಟ್ಟು ಮತ ಕೇಳುತ್ತಿದ್ದೇನೆ. ಆದರೆ ಬಿಜೆಪಿ ಕೇವಲ ಅಪಪ್ರಚಾರವನ್ನೆ ತಮ್ಮ ಬಂಡವಾಳವಾಗಿಸಿಕೊಂಡಿದ್ದಾರೆ ,ಬಿಜೆಪಿ ಮುಖಂಡರಿಗೆ ಅಭಿವೃದ್ಧಿಯ ಯಾವೂದೇ ಅಜೆಂಡಾ ಇಲ್ಲ. ಅವರಿಗಿರುವುದು ಕೇವಲ ಸುಳ್ಳು ಅಪಪ್ರಚಾರ ಅಜೆಂಡಾ ಮಾತ್ರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಗೆ ಪ್ರಮಾಣಿಕತೆ ಇಲ್ಲ. ನಾವು ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಹತ್ಯಾ ಪ್ರಕರಣಗಳ ಬಂಧಿತ ಆರೋಪಿಗಳಲ್ಲಿ ಒಬ್ಬರೂ ಕಾಂಗ್ರೆಸ್ನವರಿಲ್ಲ. ಆದರೆ ಬಿಜೆಪಿಯ ಅಂಗ ಸಂಸ್ಥೆಗಳ ಕಾರ್ಯಕರ್ತರಿದ್ದಾರೆ.. ಎ ಗ್ರೇಡ್ ದೇವಸ್ಥಾನದ ದುಡ್ಡನ್ನು ಸಿ ಗ್ರೇಡ್ ದೇವಸ್ಥಾನಕ್ಕೆ ಕೊಡಬೇಕು. ದುಡ್ಡಿನ ರೂಪದಲ್ಲಿ ಊಟದ ಅನುದಾನವನ್ನು ನೀಡುವ ಕ್ರಮವಿಲ್ಲ ಎಂದು ಕಲ್ಲಡ್ಕ, ಪುಣಚ ಶಾಲೆಗಳಿಗೆ ಬಿಸಿಯೂಟ ರದ್ದು ವಿಚಾರವನ್ನು ಪ್ರಸ್ತಾಪಿಸಿದರು. ಈ ಹಿನ್ನೆಲೆಯಲ್ಲಿ ಬಿಸಿಯೂಟಕ್ಕೆ ನೀಡುತ್ತಿದ್ದ ದೇವಸ್ಥಾನದ ಅನುದಾನವನ್ನು ರದ್ದುಗೊಳಿಸಿ, ಅಕ್ಷರ ದಾಸೋಹ ಮೂಲಕ ಬಿಸಿಯೂಟಕ್ಕೆ ಅವಕಾಶ ಒದಗಿಸಲಾಗಿತ್ತು. ಬಿಜೆಪಿಯವರು ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿಯೇ ದೇವಸ್ಥಾನದ ದುಡ್ಡನ್ನು ಅನ್ಯಕಾರ್ಯಕ್ಕೆ ಬಳಸಬಾರದು ಎಂದಿದೆ. ನಾವು ಅದನ್ನು ಆಗಲೇ ಪಾಲಿಸಿದ್ದೇವೆ ಎಂದು ರೈ ತಿರುಗೇಟು ನೀಡಿದರು.
ನಾನು ಅದ್ಭುತವಾಗಿ ಕೆಲಸ ಮಾಡಿದ್ದೇನೆ. ಕೆಲಸ ಕಾರ್ಯಗಳಲ್ಲಿ ಉದಾಸೀನ ಮಾಡಿಲ್ಲ. ಸೈದ್ಧಾಂತಿಕ ವಿಚಾರದಲ್ಲಿ ರಾಜಿ ಮಾಡಿಲ್ಲ. ಕ್ರಿಯಾಶೀಲನಾಗಿದ್ದೇನೆ. ನಾನು ಮಾಡಿದ ಕೆಲಸ ನೋಡಿ ಮತ ನೀಡಿ ಎಂದು ರೈ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ ಬೊಳ್ಳಾಯಿ, ಜಿಪಂ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಬ್ಲಾಕ್ ಅಧ್ಯಕ್ಷರಾದ ಮಾಯಿಲಪ್ಪ ಸಾಲಿಯಾನ್, ಅಬ್ಬಾಸ್ ಅಲಿ, ಪ್ರಮುಖರಾದ ಬೇಬಿ ಕುಂದರ್, ಬಿ.ಎಚ್. ಖಾದರ್, ಮಲ್ಲಿಕಾ ಶೆಟ್ಟಿ, ಜಯಂತಿ ಪೂಜಾರಿ, ಬಾಲಕೃಷ್ಣ ಆಳ್ವ, ಜಗದೀಶ್ ಕೊಯಿಲ, ಜನಾರ್ದನ ಚಂಡ್ತಿಮಾರ್ ಉಪಸ್ಥಿತರಿದ್ದರು.