ಕುಂದಾಪುರ,ಮೇ 09: ಕುಂದಾಪುರ ತಾಲೂಕು ಅಂಪಾರು ಸಮೀಪ ಮೇ.9 ರ ಮಧ್ಯಾಹ್ನ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕುಂದಾಪುರ ತಾ.ಪಂ ಸದಸ್ಯೆ ಪತಿ, ಬೇಳೂರು ನಿವಾಸಿ ಮಹೇಶ ಹೆಗ್ಡೆ(56) ಸ್ಥಳದಲ್ಲಿ ಮೃತರಾಗಿದ್ದಾರೆ. ಮಹೇಶ್ ಹೆಗ್ಡೆ ಅವರು ಕಮಲಶಿಲೆಯಿಂದ ಕುಂದಾಪುರದ ಕಡೆ ಬರುತ್ತಿದ್ದಾಗ ಅಂಪಾರು ಸಮೀಪ ಸಿದ್ದಾಪುರ ಕಡೆ ಸಾಗುತ್ತಿದ್ದ ಡಿಕ್ಕಿ ಹೊಡೆದಿದೆ. ಮುಖಾಮುಖಿ ಡಿಕ್ಕಿಯಿಂದ ಬೈಕ್ನಲ್ಲಿ ಬರುತ್ತಿದ್ದ ಮಹೇಶ್ ಹೆಗ್ಡೆ ಸ್ಥಳದಲ್ಲೇ ಸಾವಿಗೀಡಾದರೆ, ಡಿಕ್ಕಿ ಹೊಡೆದ ರಭಸಕ್ಕೆ ಕಾರು ಮೂರು ಪಲ್ಟಿಯಾಗಿದ್ದು ಕಾರು ಚಾಲಕ ಕೂಡಾ ಗಂಭೀರ ಗಾಯಗೊಂಡಿದ್ದಾರೆ.
ಮೃತ ಮಹೇಶ ಹೆಗ್ಡೆ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದು, ಕುಂದಾಪುರ ತಾ.ಪಂ.ಸದಸ್ಯೆ ಶ್ರೀಲತಾ ಶೆಟ್ಟಿ ಅವರ ಪತಿ. ಪತ್ನಿಯನ್ನು ಕೋಟೇಶ್ವರದ ಸಮೀಪದಲ್ಲಿ ಸಂಬಂಧಿಕರ ವೈಕುಂಠ ಸಮಾರಾಧನೆ ಕಾರ್ಯಕ್ರಮಕ್ಕೆ ಬಿಟ್ಟು ಅವರು ಕಮಲಶಿಲೆಯಲ್ಲಿ ನಡೆಯುತ್ತಿದ್ದ ಇನ್ನೊಂದು ಕಾರ್ಯಕ್ರಮಕ್ಕೆ ತೆರಳಿದ್ದರು. ಅಪಘಾತದ ಸುದ್ಧಿ ತಿಳಿಯುತ್ತಿದ್ದಂತೆ ಪ್ರಚಾರ ಕಾರ್ಯದಲ್ಲಿದ್ದ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ತಕ್ಷಣ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಧಾವಿಸಿದ್ದಾರೆ. ಇವತ್ತು ಸಂಜೆ ನಡೆಯಬೇಕಾಗಿದ್ದ ಬಿಜೆಪಿ ರೋಡ್ ಶೋ ಸ್ಥಗಿತಗೊಳಿಸಲಾಗಿದೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದೆಡೆ ಬೈಂದೂರಿನ ಕೆರ್ಗಾಲು ಗ್ರಾಪಂ ವ್ಯಾಪ್ತಿಯ ನಂದನವನದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇ 09 ಬುಧವಾರ ಬೆಳಿಗ್ಗೆ ನಡೆದ ವಾಹನ ಅಪಘಾತದಲ್ಲಿ ಒರ್ವ ಮೃತಪಟ್ಟ ಘಟನೆ ನಡೆದಿದೆ. ಮೊಗೇರಿ ನಿವಾಸಿ ಸತೀಶ್ ಪೂಜಾರಿ (ಸತ್ಯನಾರಾಯಣ) (30) ಮೃತ ದುರ್ದೈವಿ. ಶುಭಕಾರ್ಯ ನಿಮಿತ್ತ ಮನೆಮಂದಿಯೊಂದಿಗೆ ಕುಮಟಾದಿಂದ ಕಾರ್ಕಳಕ್ಕೆ ವೇಗವಾಗಿ ಹೋಗುತ್ತಿದ್ದ ಮಾರುತಿ ಇಕೋ ಕಾರಿಗೆ ಉಪ್ಪುಂದದಿಂದ ನಾಯ್ಕನಕಟ್ಟೆ ಮನೆಯ ಕಡೆಗೆ ತೆರಳುತ್ತಿದ್ದ ಬಜಾಜ್ ಪಲ್ಸರ್ ಬೈಕ್ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಸತೀಶ್ ಸ್ಥಳದಲ್ಲಿಯೇ ದಾರುಣವಾಗಿ ಸಾವನ್ನಪ್ಪಿದ್ದು, ಸಹ ಪ್ರಯಾಣಿಕ ಹಚ್ಚಿನ ಪ್ರಾಣಾಪಾಯವಾಗದೇ ಬಚಾವಾಗಿದ್ದಾನೆ. ಈತನನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.