ಮಂಗಳೂರು, ಸೆ. 19 (DaijiworldNews/MB) : "ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ಸಂಘಟನೆಗಳು ನಡೆಸಿದ ಕೊಲೆಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಪಾಲ್ಗೊಳ್ಳುವಿಕೆ ಇಲ್ಲ. ಸಂಸದ ನಳಿನ್ ಕುಮಾರ್ ಕಟೀಲ್ ಈ ಕೊಲೆಗಳಲ್ಲಿ ಬಂಧಿತ ಆರೋಪಿಗಳು ಯಾವ ಪಕ್ಷಕ್ಕೆ ಸೇರಿದವರು ಎಂಬುದನ್ನು ಸ್ಪಷ್ಟಪಡಿಸಬೇಕು. ಯುವಕರು ಕೊಲೆ ಮಾಡುವ ಪಕ್ಷ ಸೇರಬಾರದು" ಎಂದು ಮಾಜಿ ಸಚಿವ ರಮಾನಾಥ ರೈ ಅವರು ಹೇಳಿದ್ದಾರೆ.




ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಸರಣಿ ಕೊಲೆಗಳು ಮತ್ತು ಹಲ್ಲೆಗಳು ನಡೆದಿವೆ ಎಂಬ ನಳಿನ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದು, "ಯಾವುದೇ ಧಾರ್ಮಿಕ ಪ್ರೇರಿತ ಹತ್ಯೆಯಲ್ಲಿ ಕಾಂಗ್ರೆಸ್ ಎಂದಿಗೂ ಭಾಗಿಯಾಗಿಲ್ಲ. ಯಾವುದೇ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಒಂದೇ ಒಂದು ಚಾರ್ಜ್ಶೀಟ್ ದಾಖಲಾಗಿಲ್ಲ. ಆರೋಪಿಗಳ ಪಟ್ಟಿಯಲ್ಲಿ ಆಡಳಿತಾರೂಢ ಬಿಜೆಪಿಯ ಕಾರ್ಯಕರ್ತರೇ ಹೆಚ್ಚು. ಹಿಂದೂ ಮತ್ತು ಮುಸ್ಲಿಂ ಧಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಈ ಕೊಲೆಗಳಲ್ಲಿ ಭಾಗಿಯಾಗಿದ್ದಾರೆ " ಎಂದರು.
2 ಸಾವಿರ ರೂ. ಗಳಿಗೆ ಒಂದು ಲೋಡ್ ಮರಳನ್ನು ಜನರ ಮನೆ ಬಾಗಿಲಿಗೆ ಬರಲಿದೆ ಎಂದು ಹೇಳಿರುವ ನಳಿನ್ ತಮ್ಮ ಹೇಳಿಕೆಯಂತೆ ನಡೆದು ತೋರಿಸಲಿ ಎಂದು ರಮಾನಾಥ ರೈ ಅವರು ಸವಾಲೆಸೆದಿದ್ದಾರೆ.
ಇನ್ನು ರೈ ಬೆಂಬಲಿಗರು ಮರಳುಗಾರಿಕೆಯಲ್ಲಿ ತೊಡಗಿದ್ದಾರೆ ಎಂಬ ನಳಿನ್ ಆರೋಪಕ್ಕೆ ತಿರುಗೇಟು ನೀಡಿರುವ ರಮಾನಾಥ ರೈ ಅವರು, ನಳಿನ್ ಕುಮಾರ್ ಬೆಂಬಲಿಗರೇ ಮರಳುಗಾರಿಕೆಯಲ್ಲಿ ಭಾಗಿಯಾಗಿದ್ದಾರೆ. ಪರವಾನಿಗೆ ಪಡೆದು ಮರಳುಗಾರಿಕೆ ನಡೆಸುವುದು ದಂಧೆಯೋ ಅಥವಾ ಪರವಾನಿಗೆ ಇಲ್ಲದೆ ಮರಳುಗಾರಿಕೆ ನಡೆಸುವುದು ದಂಧೆಯೋ ಎಂದು ಸಂಸದರೇ ಜನರಿಗೆ ತಿಳಿಸಲಿ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅವರು ಮಾತನಾಡಿ, ಸಂಸದ ನಳಿನ್ ಅವರು 2,000 ರೂ.ಗೆ ಮರಳು ಲಭ್ಯವಾಗುತ್ತದೆ ಹೇಳಿದ್ದಾರೆ. ಒಂದು ಟ್ರಕ್ ಲೋಡ್ ಮರಳಿನ ತೆರಿಗೆಯೇ 3,000 ರೂ. ಆಗಿದೆ. ಸಾರಿಗೆ ವೆಚ್ಚ ಮತ್ತು ಕಾರ್ಮಿಕ ವೇತನ ಎಲ್ಲಾ ಸೇರಿ ಏಳರಿಂದ ಎಂಟು ಸಾವಿರ ರೂ. ಆಗುತ್ತದೆ. ಹಾಗಾದರೆ ಪ್ರತಿ ಲೋಡ್ ಮರಳನ್ನು 2,000 ರೂ.ಯಂತೆ ನೀಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದು ಅವರಿಗೆ ಸಾಮಾನ್ಯ ಜ್ಞಾನ ಇಲ್ಲ. ಅವರ ಹೇಳಿಕೆ ನಗೆ ಪಾಟಲಿಗೆ ಕಾರಣವಾಗುತ್ತದೆ. ಬಿಜೆಪಿ ಮರಳನ್ನು ಅಷ್ಟು ಅಗ್ಗದ ದರದಲ್ಲಿ ನೀಡಿದರೆ, ನಾವು ಅದನ್ನೇ ಸ್ವಾಗತಿಸುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಮುಖಂಡರಾದ ಶುಭೋದಯ ಆಳ್ವ, ಸದಾಶಿವ ಶೆಟ್ಟಿ, ಬೇಬಿ ಕುಂದರ್, ವಿಶ್ವಾಸ್ ಅಮೀನ್ ಮತ್ತು ಪ್ರವೀನ್ ಚಂದ್ರ ಆಳ್ವಾ ಉಪಸ್ಥಿತರಿದ್ದರು.