ಮಂಗಳೂರು, ಮೇ 10: ಇಂದು ಬಹಿರಂಗ ಪ್ರಚಾರಕ್ಕೆ ಒಂದೆಡೆ ತೆರೆಬೀಳುತ್ತಿದ್ದು, ಇನ್ನೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿ ಪ್ರಚಾರ, ಅಪಪ್ರಚಾರ ಸೇರಿದಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.
ಪಾರದರ್ಶಕ ಮತದಾನಕ್ಕಾಗಿ ಮತದಾರರಿಗೆ ತೊಂದರೆ ಆಗುವಂತಹ ಯಾವುದೇ ರೀತಿಯ ವಿಷಯಗಳನ್ನು ಪ್ರಚಾರ ಪಡಿಸುವುದರ ಬಗ್ಗೆ ಹದ್ದಿನ ಕಣ್ಣು ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಆಯುಕ್ತ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೊತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸಮಾಜದ ಶಾಂತಿ ಕೆಡಿಸುವವರ ಪತ್ತೆಗೆ ಕ್ರಮ ವಹಿಸಲಾಗಿದ್ದು, ಜೈಲು ಶಿಕ್ಷೆಗೂ ಗುರಿಪಡಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ೧೮೫೮ ಮತಗಟ್ಟೆಗಳಿದ್ದು, ಎಂಟು ಕ್ಷೇತ್ರಗಳಲ್ಲಿ ಒಟ್ಟು 13,176 ಮತಗಟ್ಟೆ ಸಿಬ್ಬಂದಿಗಳ ನೇಮಕ ಮಾಡಲಾಗಿದೆ. ಇದರೊಂದಿಗೆ ನಿಯೋಜಿತ ಮತಗಟ್ಟೆ ಅಧಿಕಾರಿಗಳನ್ನು ಮತಗಟ್ಟೆಗೆಗಳಿಗೆ ತಲುಪಿಸಿ ಚುನಾವಣಾ ಕರ್ತವ್ಯ ಮುಕ್ತಾಯವಾದ ಬಳಿಕ ಡಿ ಮಸ್ಟರಿಂಗ್ ಕೇಂದ್ರಕ್ಕೆ ಕರೆತರಲು ಒಟ್ಟು 648 ವಾಹನಗಳ ಸೌಲಭ್ಯವನ್ನು ಒದಗಿಸಲಾಗಿದೆ ಅವರು ಹೇಳಿದ್ದಾರೆ
ದ.ಕ. ಜಿಲ್ಲೆಯ ಒಟ್ಟು ಎಂಟು ಕ್ಷೇತ್ರಗಳಲ್ಲಿ 17,11,848 ಮತದಾರರಿದ್ದು, ಇವರಲ್ಲಿ ಮಹಿಳಾ ಮತದಾರರೇ ಅಧಿಕ. ಒಟ್ಟು ಮತದಾರರಲ್ಲಿ 8,70,675 ಮಹಿಳಾ ಮತದಾರರು ಹಾಗೂ 8,41,073 ಮಂದಿ ಪುರುಷ ಮತದಾರರಾಗಿದ್ದಾರೆ. ಸಾರಿಗೆ ಸಂಪರ್ಕದ ಕೊರತೆ ಇರುವ 33 ಪ್ರದೇಶಗಳಿಗೆ ಕೆಎಸ್ಸಾರ್ಟಿಸಿ ಬಸ್ ಮತದಾನದ ದಿನ ವಿಶೇಷ ಸೇವೆ ಒದಗಿಸಲಿದೆ. ವಿಶೇಷವಾಗಿ ಸುಳ್ಯ, ಬೆಳ್ತಂಗಡಿ, ಪುತ್ತೂರಿನಲ್ಲಿ ಮತಗಟ್ಟೆ ಸಿಬ್ಬಂದಿ ಮತ್ತು ಮತ ಯಂತ್ರಗಳನ್ನು ಸಾಗಿಸಲು 160 ಬಸ್ಗಳನ್ನು ಬಳಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.