ಉಡುಪಿ, ಸೆ. 20 (DaijiworldNews/SM): ಕರಾವಳಿ ಭಾಗದಲ್ಲಿ ಕಳೆಡೆರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಹಲವೆಡೆ ಆಸ್ತಪಾಸ್ತಿ ಹಾನಿಯಾಗಿದ್ದು, ಜನಜೀವನಕ್ಕೆ ಅಡ್ಡಿಯುಂಟಾಗಿದೆ. ಹಲವು ಮನೆಗಳಿಗೆ ನೀರು ನುಗ್ಗಿದೆ. ಏಳು ನೂರಕ್ಕೂ ಅಧಿಕ ಮನೆಗಳಿಗೆ ಹಾನಿಯುಂಟಾಗಿದೆ. ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ಅಪಾಯದಲ್ಲಿದ್ದ ಜನರನ್ನು ಸ್ಥಳಾಂತರ ಮಾಡಲಾಗಿದೆ.








ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಿಂದ ಮಳೆ ಸುರಿಯುತ್ತಿದ್ದು, ಕೇವಲ ಉಡುಪಿ ತಾಲೂಕಿನಲ್ಲಿ ಬರೋಬ್ಬರಿ 315.3 ಮಿಲಿ. ಮೀಟರ್ ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಸರಾಸರಿ 197 ಮಿ.ಮಿ ಮಳೆ ದಾಖಲೆಯಾಗಿದೆ. ಸುಮಾರು 40 ವರ್ಷದ ಬಳಿಕ ಈ ರೀತಿಯಾಗಿ ದಾಖಲೆಯ ಮಳೆ ಸುರಿದಿದೆ. ಈ ನಡುವೆ ಜಿಲ್ಲೆಯಲ್ಲಿ ಇಲ್ಲಿಯ ತನಕ ಒಟ್ಟು 350 ಮಂದಿ ಸಂತ್ರಸ್ತರ ರಕ್ಷಣೆ ಮಾಡಲಾಗಿದ್ದು, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಉಡುಪಿ, ಕಾಪು ,ಬ್ರಹ್ಮಾವರ, ಕಾರ್ಕಳ ತಾಲೂಕಿನಲ್ಲಿ ಎನ್ ಡಿಆರ್ ಎಫ್ ತಂಡದ ಮೂಲಕ ಕಾರ್ಯಚರಣೆ ನಡೆಸಲಾಗಿದೆ.
ಇನ್ನು ಉಡುಪಿ ಜಿಲ್ಲೆಯ ಹೆಚ್ಚಿನ ಭಾಗಗಳು ನೆರೆಯಿಂದ ಆವೃತಗೊಂಡಿವೆ. ದೊಡ್ಡಣಗುಡ್ಡೆ, ಪೆರಂಪಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಎನ್ ಡಿಆರ್ ಎಫ್ ತಂಡ ಕಾರ್ಯಾಚರಣೆ ನಡೆಸಿ ಜನರನ್ನು ರಕ್ಷಣೆ ಮಾಡಿದೆ. ಇನ್ನು ಹೆಚ್ಚಿನ ಕಾರ್ಯಾಚರಣೆಗೆ ಹಾಗೂ ತುರ್ತು ಸ್ಪಂದನೆಗೆ ಮಂಗಳೂರು ಹಾಗೂ ಮೈಸೂರಿನಿಂದ ಎನ್ ಡಿಆರ್ ಎಳ್ ತಂಡ ಜಿಲ್ಲೆಯಲ್ಲಿ ಮೊಕ್ಕಂ ಹೂಡಿದೆ. ಅಲ್ಲದೆ, ಹೆಲಿಕಾಪ್ಟರ್ ಮೂಲಕವೂ ರಕ್ಷಣ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಲ್ಸಂಕ ಸಮೀಪ ಕ್ರೇನ್ ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.
ಇನ್ನು ಮೀನುಗಾರಿಕೆಗೆ ತೆರಳಿದ್ದ 10 ಮಂದಿ ಮೀನುಗಾರರು ಸೈಂಟ್ ಮೇರಿಸ್ ದ್ವೀಪದಲ್ಲಿ ಸಿಲುಕಿದ್ದು, ಅವರನ್ನು ಕರಾವಳಿ ಕಾವಲು ಪಡೆ ಮೂಲಕ ರಕ್ಷಿಸಲಾಗಿದ್ದು, ನೆರೆ ಸಂಕಷದಲ್ಲಿದ್ದ ಎಲ್ಲರನ್ನು ರಕ್ಷಿಸಲಾಗಿದೆ. ಭಾರಿ ಮಳೆಗೆ ಮಲ್ಪೆಯಲ್ಲಿ ೩ ಬೋಟ್ ಮುಳುಗಡೆಯಾಗಿವೆ. ಪರಿಣಾಮ ಕಲ್ಲು ಬಂಡೆ ಮೇಲೆ ಮೀನುಗಾರರು ಆಶ್ರಯ ಪಡೆದುಕೊಂಡು ಬಳಿಕ ಸುರಕ್ಷಿತವಾಗಿ ದಡ ಸೇರಿದ್ದಾರೆ.
ಕಾಪು ತಾಲ್ಲೂಕಿನಲ್ಲಿ ೬, ಕಾರ್ಕಳದಲ್ಲಿ ೨೪ ಮನೆಗಳಿಗೆ ಹಾನಿಯಾಗಿದೆ. ಜಿಲ್ಲಾಡಳಿತದಿಂದ ೩೧ ಪರಿಹಾರ ಕೇಂದ್ರಗಳ ಸ್ಥಾಪನೆಯಾಗಿದ್ದು, ಪರಿಹಾರ ಕೆಂದ್ರ ಗಳಲ್ಲಿ ೧೨೦೧ ಜನರು ಆಶ್ರಯ ಪಡೆಯುತ್ತಿದ್ದಾರೆ. ಕಣಜಾರ್ ಭಾಗದಲ್ಲಿ ಮಳೆಗೆ ಮನೆ ಕುಸಿದು ಸುಮಾರು ೮ ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿದೆ. ಪಡುಬಿದ್ರಿಯಲ್ಲಿ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯ ಕಾರಣದಿಂದಾಗಿ ಸುರಿದ ಭಾರೀ ಮಳೆಗೆ ನೆರೆಯಿಂದ ಆವೃತಗೊಂಡು ಮನೆಯೊಂದು ಜಲಸಮಾಧಿಯಾಗಿದ್ದು, ಲಕ್ಷಾಂತರ ರೂ. ಹಾನಿಯುಂಟಾಗಿದೆ. ಇನ್ನು ಸುರಿದ ಭಾರೀ ಮಳೆಯಿಂದಾಗಿ ನೆರೆ ಪರಿಸ್ಥಿತಿ ಉಂಟಾಗಿ ಜಿಲ್ಲೆಯಲ್ಲಿ ಹಲವು ರಸ್ತೆಗಳು ಸಂಪರ್ಕ ಕಳೆದುಕೊಂಡಿವೆ. ಧಾರಕಾರ ಮಳೆಗೆ ಉಡುಪಿ ಮಣಿಪಾಲ ಮುಖ್ಯ ರಸ್ತೆಯ ಕಲ್ಸಂಕ ಸಂಪೂರ್ಣ ಜಲಾವೃತಗೊಂಡು ಉಡುಪಿ ಮಣಿಪಾಲ ಸಂಚಾರ ಬಂದ್ ಆಗಿದೆ.
ಅಲ್ಲದೆ ಜಿಲ್ಲೆಯ ನದಿಗಳು ಮೈದುಂಬಿ ಹರಿಯುತ್ತಿದ್ದು, ಸ್ವರ್ಣ, ಸೀತ, ಮಡಿಸಾಲು, ಉದ್ಯಾವರ, ಶಾಂಬವಿ, ಇಂದ್ರಾಣಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಒಟ್ಟಿನಲ್ಲಿ ಕಳೆದ ಎರಡು ದಿನಗಳಿಂದ ಕರಾವಳಿ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಉಡುಪಿ ಜಿಲ್ಲೆ ಭಾಗಶಃ ನೆರೆಯಿಂದ ಆವೃತಗೊಂಡಿದೆ.