ಮಂಗಳೂರು, ಸೆ. 20 (DaijiworldNews/SM): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಹಲವೆಡೆ ಗುಡ್ಡ ಕುಸಿತವುಂಟಾಗಿದ್ದು, ಆಸ್ತಿಪಾಸ್ತಿ ಹಾನಿಯುಂಟಾಗಿದೆ. ನೀರುಮಾರ್ಗದಲ್ಲಿ ಗುಡ್ಡ ಕುಸಿತದಿಂದಾಗಿ ಕಾಂಕ್ರಿಟ್ ರಸ್ತೆ ಕುಸಿದಿದ್ದು, ಸಂಪರ್ಕ ಕಡಿತಗೊಂಡಿದೆ.

ಕಾಂಕ್ರಿಟ್ ರಸ್ತೆ ಮಧ್ಯೆ ಭಾಗವೇ ಧರಶಾಹಿಯಾಗಿದೆ. ಕೆಲ್ರಾಯಿಯಿಂದ ಬಿತ್ತುಪಾದೆ ಸಂಪರ್ಕಿಸುವ ರಸ್ತೆಯಲ್ಲಿ ಗುಡ್ಡ ಕುಸಿತದಿಂದ ಈ ಅವಘಡ ಸಂಭವಿಸಿದೆ. ಮುಂಜಾನೆಯಿಂದಲೇ ಸುರಿದ ಭಾರೀ ಮಳೆಗೆ ರಸ್ತೆ ಕುಸಿತಗೊಂಡಿದೆ. ಇನ್ನು ರಸ್ತೆ ಕುಸಿತದಿಂದಾಗಿ ಎರಡು ಪ್ರದೇಶಗಳ ಸಂಪರ್ಕ ಕಡಿತಗೊಂಡಿದೆ. ಸ್ಥಳಕ್ಕೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ್, ಮಾಜಿ ಶಾಸಕ ಮೊಯ್ದಿನ್ ಬಾವಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.