ಕಾಸರಗೋಡು, ಸೆ. 20 (DaijiworldNews/SM): ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಬಂಧಿತರನ್ನು ಕುಂಬಳೆ ದೇವಿನಗರದ ನಿತೀಶ್(30) ಮತ್ತು ಕುಂಬಳೆ ಬದ್ರಿಯಾ ಕೆ.ಕೆ. ರಸ್ತೆಯ ಅನ್ಸಾರ್ (27) ಎಂದು ಗುರುತಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೆರಿಯಡ್ಕ ಕಟ್ಟದಂಗಡಿಯ ಸುನೀತಾ(30) ಎಂಬಾಕೆಯನ್ನು ಈ ಹಿಂದೆ ಬಂಧಿಸಲಾಗಿತ್ತು. ಈಕೆ ಈ ಇಬ್ಬರು ಆರೋಪಿಗಳಿಗೆ ಬಾಲಕಿಯನ್ನು ತಲುಪಿಸಿದ ಮಧ್ಯವರ್ತಿಯಾಗಿದ್ದಳು. ಈ ಹಿನ್ನೆಲೆ ಆಕೆಯನ್ನು ಬಂಧಿಸಲಾಗಿದೆ.
2018 ರ ಡಿಸಂಬರ್ 18ರಂದು ರಾತ್ರಿ ಘಟನೆ ನಡೆದಿತ್ತು. ಉತ್ಸವ ನೋಡಲೆಂದು ಬಾಲಕಿಯನ್ನು ಕರೆದೊಯ್ದು ನಿರ್ಜನ ಸ್ಥಳದಲ್ಲಿ ಕೃತ್ಯ ನಡೆಸಿದ್ದರು. ಬದಿಯಡ್ಕ ಠಾಣಾ ವ್ಯಾಪ್ತಿಯ ಈ ಬಾಲಕಿಯನ್ನು ಪ್ರಥಮ ಆರೋಪಿ ನಿತೀಶ್ ಮತ್ತು ಮೂರನೇ ಆರೋಪಿ ಸುನೀತಾ ಬೈಕ್ ನಲ್ಲಿ ಕರೆದುಕೊಂಡು ಬಂದು ಕುಂಬಳೆ ಸರಕಾರಿ ಆಸ್ಪತ್ರೆ ಬಳಿ ತಲುಪಿಸಿದ್ದರು. ನಿತೀಶ್ ತನ್ನ ಸ್ನೇಹಿತ ಅನ್ಸಾರ್ ನನ್ನು ಕರೆಸಿ ಅಲ್ಲಿಂದ ಸಮೀಪದ ಕಾಡಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಪ್ರಕರಣ ದಾಖಲಿಸಲಾಗಿತ್ತು.