ಬೆಳ್ಮಣ್, ಸೆ. 20 (DaijiworldNews/SM): ಬಾರೀ ಮಳೆಯಿಂದ ಕಾರ್ಕಳ ಮುಂಡ್ಕೂರು ಗ್ರಾಮದ ಸಂಕಲಕರಿಯದಲ್ಲಿ ಹರಿಯುವ ಶಾಂಭವಿ ನದಿಯು ತುಂಬಿ ಹರಿಯುತ್ತಿದ್ದು, ಅಪಾಯ ಮಟ್ಟವೇರಿದೆ. ಸಮೀಪದ ಕೃಷಿ ಭೂಮಿಗಳು ಸಂಪೂರ್ಣ ಜಲಾವೃತಗೊಂಡಿವೆ.




ನಿರಂತರ ಸುರಿದ ಮಳೆಗೆ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಮುಂಡ್ಕೂರು ರಸ್ತೆ ಸಂಪೂರ್ಣ ಜಲಾವೃತ್ತಗೊಂಡಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಭಾರೀ ಮಳೆಯಾಗುತ್ತಿದ್ದು ಮುಂಡ್ಕೂರು ಗ್ರಾಮದ ಬಹುತೇಕ ಕೃಷಿ ಭೂಮಿಗಳು ಜಲಾವೃತ್ತಗೊಂಡಿದ್ದು ಅಪಾರ ಕೃಷಿ ಹಾನಿ ಸಂಭವಿಸಿದೆ.
ಮುಂಡ್ಕೂರು, ಏಳಿಂಜೆ, ಉಳೆಪಾಡಿ, ಬೋಳ , ಬೆಳ್ಮಣ್, ನಂದಳಿಕೆ ಭಾಗದ ಕೃಷಿ ಭೂಮಿ ಜಲಾವೃತವಾಗಿದ್ದು ಸಂಕಲಕರಿಯದ ಮೇರಿ ರೋಮನ್ ಸೆರಾವೋ,ಕಂಡಿಗ ಅಶೋಕ ಶೆಟ್ಟಿ, ಭಾಸ್ಕರ ಶೆಟ್ಟಿ,ಲಿಡಿಯಾ,ಸುಧಾಕರ ಸಾಲ್ಯಾನ್,ದೊಡ್ಡಣ್ಣ ಶೆಟ್ಟಿ,ಸಾಧು ಮೂಲ್ಯ,ಚಂದ್ರಹಾಸ ಮತ್ತಿತರರ ಕೃಷಿ ಭೂಮಿಗೆ ಹಾನಿಯಾಗಿದೆ. ಮಳೆಯಿಂದ ಕಂಗಾಲಾದ ಕೃಷಿಕರು ಕಾರ್ಕಳ ತಹಶೀಲ್ದಾರರಿಗೆ ಮೊರೆ ಹೋಗಿದ್ದಾರೆ. ಜಲಪ್ರವಾಹದಿಂದ ಕೃಷಿಕರು ಸಂಪೂರ್ಣ ಕಂಗಲಾಗಿದ್ದಾರೆ.
ಶನಿವಾರ ರಾತ್ರಿ ಹಾಗೂ ರವಿವಾರದ ನಿರಂತರ ಮಳೆಗೆ ಸಂಕಲಕರಿಯ ಶಾಂಭವಿ ನದಿ ತುಂಬಿ ತುಳುಕಿ ಹರಿಯುತ್ತಿದ್ದು ನೆರೆಯಿಂದಾಗಿ ಕೃಷಿ ಭೂಮಿ ಜಲಾವೃತಗೊಂಡಿದೆ. ಮುಂಡ್ಕೂರು, ಸಂಕಲಕರಿಯ, ಏಳಿಂಜೆ, ಉಳೆಪಾಡಿ ಭಾಗದ ಕೃಷಿಕರ ಪಾಲಿನ ಭರವಸೆಯ ಹೊಲಗಳು ಸಂಪೂರ್ಣ ಜಲಾವೃತಗೊಂಡಿದ್ದು ರೈತರು ಬೆಳೆ ಹಾನಿಯ ಭೀತಿ ಎದುರಿಸುತ್ತಿದ್ದಾರೆ. ಇದೀಗ ಈ ಬಾಗದ ಕೃಷಿಕರ ಗದ್ದೆಗಳ ಪೈರು ಭತ್ತದ ತೆನೆ ಬಿಡಲು ಸಿದ್ಧವಾಗಿದ್ದು ಈ ಸಂದರ್ಭದ ಭೀಕರ ನೆರೆಗೆ ಎಲ್ಲವೂ ನಾಶವಾಗುವ ಸಾಧ್ಯತೆ ಇದೆ.
ಮುಂಡ್ಕೂರಿನ ಪಡಿತ್ತಾರುವಿನಲ್ಲಿ ರಸ್ತೆಯನ್ನು ನೀರು ಆವರಿಸಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಏಳಿಂಜೆ ಪಟ್ಟೆಕ್ರಾಸ್ನಲ್ಲಿ ತಗ್ಗು ಭಾಗದ ಕಟ್ಟಡ ಮುಳಗಡೆಯಾಗಿದ್ದು ಬೇಕರಿ, ಕೋಳಿ ಅಂಗಡಿ ಸಹಿತ ವಿವಿಧ ಅಂಗಡಿಗಳು ಮುಳುಗಡೆಯಾಗಿದೆ. ಏಳಿಂಜೆ ನಂದನ ಪ್ರಕಾಶ್ ಶೆಟ್ಟಿಯವರ ಕಟಾವಿಗೆ ಸಿದ್ಧವಾಗಿರುವ ಭತ್ತದ ಹೊಲ ಸಂಪೂರ್ಣ ಮುಳಗಡೆಯಾಗಿದ್ದು ಲಕ್ಷಾಂತರ ನಷ್ಟ ಅಂದಾಜಿಸಲಾಗಿದೆ. ಸಂಕಲಕರಿಯ ಸುಧಾಕರ ಸಾಲ್ಯಾನ್ರವರ 15 ಎಕರೆ ಕೃಷಿಭೂಮಿ ಜಲಾವೃತಗೊಂಡಿದ್ದು ಆತಂಕ ಎದುರಾಗಿದೆ.
ಮುಂಡ್ಕೂರು ದೊಡ್ಡಮನೆಯ ಕಲ್ಲಾಡಿ ನಾಗಬನ ಜಲಾವೃತಗೊಂಡಿದೆ.
ಬಾರೀ ಮಳೆಗೆ ಸೂಡದಲ್ಲಿ ಎರಡು ಮನೆ ಕುಸಿತ
ಇನ್ನು ಬೆಳ್ಮಣ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೂಡ ಗ್ರಾಮದಲ್ಲಿ ನದಿಯ ಪ್ರವಾಹದ ನೆರೆ ನೀರಿನಿಂದಾಗಿ ಎರಡು ಮನೆಗಳು ಧರಶಾಹಿಯಾದ ಘಟನೆ ಭಾನುವಾರ ನಡೆದಿದೆ. ನಿರಂತರ ಸುರಿದ ಮಳೆಯಿಂದಾಗಿ ಸೂಡ ಗ್ರಾಮದಲ್ಲಿ ಹರಿಯುವ ಪಾಪನಾಶಿನಿ ನದಿಯು ತುಂಬಿ ಹರಿಯುತ್ತಿದ್ದು ನದಿ ತೀರದ ಬಹುತೇಕ ಕೃಷಿಭೂಮಿಗಳು ಜಲಾವೃತ್ತಗೊಂಡಿದೆ.
ಸೂಡ ಗ್ರಾಮದ ರಾಮಚಂದ್ರ ಭಟ್ ಹಾಗೂ ಅಮ್ಮಣಿ ಮೂಲ್ಯ ಎಂಬವರ ಮನೆಗಳು ಸಂಪೂರ್ಣ ಧರಶಾಹಿಯಾಗಿದೆ. ಕುಂಬ್ಳೆ ಅಮ್ಮಣಿ ಮೂಲ್ಯರ ಮನೆ ಸಂಪೂರ್ಣ ಜಲಾವೃತ್ತಗೊಂಡು ಕುಸಿದ ಸಂದರ್ಭ ಅಗತ್ಯ ವಸ್ತುಗಳನ್ನು ಮನೆ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯವನ್ನು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಮಾಡಿದರು.