ಕಾಸರಗೋಡು, ಸೆ. 21 (DaijiworldNews/MB) : ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಗಾಳಿ ಮಳೆಯಿಂದ ಜನತೆ ತತ್ತರಿಸಿದ್ದಾರೆ.






ಮಳೆಯ ಅಬ್ಬರದಿಂದ ನದಿಗಳು ಉಕ್ಕಿ ಹರಿದ ಪರಿಣಾಮ ತಗ್ಗು ಪ್ರದೇಶದಲ್ಲಿ ನೆರೆ ಉಂಟಾಗಿದ್ದು, ಹಲವಾರು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಶುಕ್ರವಾರ ರಾತ್ರಿಯಿಂದ ನಿರಂತರ ಮಳೆಸುರಿಯುತ್ತಿದೆ.
ಲಕ್ಷಾಂತರ ರೂ. ಗಳ ಕೃಷಿ ಹಾನಿ ಉಂಟಾಗಿದೆ. ಮಧುವಾಹಿನಿ ಹೊಳೆಯು ಉಕ್ಕಿ ಹರಿಯುತ್ತಿರುವುದರಿಂದ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರ ಆವರಣದಲ್ಲಿ ನೀರು ತುಂಬಿಕೊಂಡಿದೆ.
ಮಧೂರು ಕ್ಷೇತ್ರ ಪರಿಸರವೂ ಜಲಾವೃತಗೊಂಡಿದೆ. ಕ್ಷೇತ್ರ ಪರಿಸರದ ಬಯಲಿನಲ್ಲಿ ನೀರು ತುಂಬಿಕೊಂಡಿದ್ದು, ರಸ್ತೆಯಲ್ಲೂ ನೀರು ಹರಿಯುತ್ತಿದೆ. ಅದೇ ಸಂದರ್ಭದಲ್ಲಿ ಸಮೀಪದ ಮನೆಗಳಿಗೆ ನೀರು ನುಗ್ಗಿದೆ.
ಮಧೂರು ಪಟ್ಲದಲ್ಲಿ ನೆರೆ ಹಿನ್ನಲೆಯಲ್ಲಿ ಮೂರು ಕುಟುಂಬಗಳನ್ನು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ.
ಬಂಗ್ರ ಮಂಜೇಶ್ವರ ಹೊಳೆ ಉಕ್ಕಿ ಹರಿದ ಪರಿಣಾಮ ಸುಮಾರು 75 ಎಕೆರೆಯಷ್ಟು ಕೃಷಿ ಹಾನಿ ಉಂಟಾಗಿದೆ. ಹಲವು ತೆಂಗು, ಕಂಗು, ಬಾಳೆಗಳು ನೆಲಕಚ್ಚಿವೆ. ರಾಷ್ಟ್ರೀಯ ಹೆದ್ದಾರಿ ಮಂಜೇಶ್ವರದಲ್ಲಿ ಮರಬಿದ್ದ ಪರಿಣಾಮ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ಥಗೊಂಡಿತ್ತು.