ಮಂಗಳೂರು, ಸೆ. 21 (DaijiworldNews/MB) : ಡ್ರಗ್ಸ್ ಸಾಗಣೆ ಹಾಗೂ ಸೇವನೆ ಆರೋಪದಲ್ಲಿ ಶನಿವಾರ ಬಂಧಿಸಲ್ಪಟ್ಟಿದ್ದ ಡ್ಯಾನ್ಸರ್, ನೃತ್ಯ ಸಂಯೋಜಕ ಕಿಶೋರ್ ಅಮಾನ್ ಶೆಟ್ಟಿ (30) ಹಾಗೂ ಅಕೀಲ್ ನೌಶೀಲ್ (28) ಅನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.

ಭಾನುವಾರ ನ್ಯಾಯಾಧೀಶರ ನಿವಾಸದಲ್ಲಿ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಬಳಿಕ ಪೊಲೀಸರು ವಶಕ್ಕೆ ಪಡೆದುಕೊಂಡರು. ಇಬ್ಬರನ್ನು ಭಾನುವಾರ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು ಇಂದು ವರದಿ ದೊರೆಯಲಿದೆ.
ಪರೀಕ್ಷೆಯ ವರದಿ ನೆಗೆಟಿವ್ ಬಂದಲ್ಲಿ ಇಬ್ಬರ ವಿಚಾರಣೆಯನ್ನು ಪೊಲೀಸರು ಆರಂಭಿಸಲಿದ್ದು ಪಾಸಿಟಿವ್ ಆದ್ದಲ್ಲಿ ಅವರಿಗೆ ಕೊರೊನಾ ನಿಯಾಮಾವಳಿ ಪ್ರಕಾರವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದು ವರದಿಯಾಗಿದೆ.
ಪ್ರಾಥಮಿಕ ವಿಚಾರಣೆಯ ಸಂದರ್ಭದಲ್ಲಿ, ಕಿಶೋರ್ ಶೆಟ್ಟಿ ಸ್ವತಃ ಮಾದಕ ವ್ಯಸನಿಯಾಗಿದ್ದು ಇತ್ತೀಚೆಗೆ ಮಾದಕವಸ್ತು ಸಾಗಾಟವನ್ನು ಆರಂಭಿಸಿದ್ದರು ಎಂದು ಬಹಿರಂಗಪಡಿಸಿದ್ದಾರೆ.
ಡ್ಯಾನ್ಸರ್ ಆಗಿರುವ ಕಿಶೋರ್ ಬಾಲಿವುಡ್ನ ಕೆಲವು ಸಿನಿಮಾಗಳಲ್ಲಿ ಸಣ್ಣ ಪಾತ್ರವನ್ನು ನಿರ್ವಹಿಸಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಮುಂಬೈನಿಂದ ನಗರಕ್ಕೆ ವಾಪಾಸ್ ಬಂದಿದ್ದರು. ಅವರ ಕುಟುಂಬವು ಸಣ್ಣ ಹೆಂಚಿನ ಮನೆಯಲ್ಲಿ ವಾಸಿಸುತ್ತಿದ್ದು ಕೊರೊನಾ ಲಾಕ್ಡೌನ್ ಸಂದರ್ಭ ತೀವ್ರ ಆರ್ಥಿಕ ಸಮಸ್ಯೆಯನ್ನು ಎದುರಿಸಿದ್ದರು. ಆ ಕಾರಣದಿಂದಾಗಿ ಡ್ರಗ್ಸ್ ದಂಧೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು ಎಂದು ತಿಳಿಸಿದ್ದಾರೆ. ಮುಂಬೈಯಲ್ಲಿರುವ ತಮ್ಮ ಸ್ನೇಹಿತರಿಂದ ಮುಂಬೈಯಿಂದ ಡ್ರಗ್ಸ್ ತರಿಸಿಕೊಳ್ಳುತ್ತಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.