ಕಾಸರಗೋಡು, ಸೆ. 21 (DaijiworldNews/MB) : ಕಾಸರಗೋಡು ಜಿಲ್ಲೆಯಲ್ಲಿ ಮಳೆ ಅಬ್ಬರಕ್ಕೆ ಇಬ್ಬರು ಬಲಿಯಾಗಿದ್ದಾರೆ. 25 ಕ್ಕೂ ಅಧಿಕ ಮನೆಗಳು ಹಾನಿಗೊಂಡಿವೆ. 20 ಕ್ಕೂ ಅಧಿಕ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.



ಮಧೂರು ಚೇನಕ್ಕೋಡುನಲ್ಲಿ ಬಯಲಿನಲ್ಲಿ ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ಚೆಂದ್ರಶೇಖರ (37) ಹಾಗೂ ಚೆರ್ವತ್ತೂರು ಮಯ್ಯಚ್ಚಿಯಲ್ಲಿ ಸುಧಾಕರ (50) ಎಂಬವರು ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ.
ಅಡ್ಕತ್ತಬೈಲ್ ಬೀಚ್ ಪರಿಸರದಲ್ಲಿ ಇಂದು ಬೆಳಿಗ್ಗೆ ಬೀಸಿದ ಸುಂಟರ ಗಾಳಿಗೆ 12 ರಷ್ಟು ಮನೆಗಳು ಭಾಗಶ: ಹಾನಿಗೊಂಡಿದೆ. ಮಧೂರು ಪಟ್ಲದಿಂದ ಮೂರು ಹಾಗೂ ಮೊಗರು ಪರಿಸರದಿಂದ ಏಳು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಮಂಜೇಶ್ವರ ತಾಲೂಕಿನ ಲ್ಲಿ ಫೆಲಿಕ್ಸ್ ಡಿ ಸೋಜ ಎಂಬವರ ಮನೆ ಮೇಲೆ ಮರ ಬಿದ್ದು, ಹಾನಿಗೊಂಡಿದೆ. ಕೊಡ್ಲಮೊಗರು ಎಂಬಲ್ಲಿ ಅಬ್ದುಲ್ ಅಝೀಜ್ ಹಾಗೂ ಕುಂಬ್ಡಾಜೆ ಉಬ್ರಂಗಳದ ಲಕ್ಷ್ಮಿ ನಾರಾಯಣ ಭಟ್ರವರ ಮನೆ ಮೇಲೆ ಮರ ಉರುಳಿ ನಾಶ ನಷ್ಟ ಉಂಟಾಗಿದೆ. ವೆಳ್ಳರಿ ಕುಂಡು ಬಳಾಲ್ನಲ್ಲಿ 12 ಕುಟುಂಬ, ಕಳ್ಳಾರ್ನಲ್ಲಿ ಮೂರು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಮಧುವಾಹಿನಿ, ತೇಜಸ್ವಿನಿ ಹೊಳೆಗಳು ಉಕ್ಕಿ ಹರಿಯುತ್ತಿದೆ. ಪಿಲಿಕ್ಕೋಡುನಲ್ಲಿ 60 ರಷ್ಟು ಮನೆಗಳಿಗೆ ನೀರು ನುಗ್ಗಿದೆ. ಸೋಮವಾರ ಬೆಳಿಗ್ಗೆಯಿಂದ ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಇಂದು ಆರಂಜ್ ಅಲರ್ಟ್ ಆಗಿದ್ದು, ಬುಧವಾರ ತನಕ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.