ಕಾಪು, ಸೆ.21 (DaijiworldNews/HR): ಕಾಪು ಲೈಟ್ ಹೌಸ್ ಬಳಿಯ ನದಿ ಪಾತ್ರದಿಂದ ನೆರೆ ನೀರು ಸಮುದ್ರ ಸೇರುತ್ತಿದ್ದು ವಿಶ್ವ ಪ್ರಸಿದ್ದ ಲೈಟ್ ಹೌಸ್ನ್ನು ಸಂಪರ್ಕಿಸುವ ಕಾಲು ದಾರಿಯ ಮಾರ್ಗವು ಸಂಪೂರ್ಣ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ.







ಕಾಪು ಬೀಚ್ನಲ್ಲಿ ಬ್ರಿಟೀಷರ ಕಾಲದಲ್ಲಿ ನಿರ್ಮಾಣಗೊಂಡಿರುವ ಲೈಟ್ ಹೌಸ್ನ ಹಿಂಭಾಗದಲ್ಲಿ ಸಮುದ್ರ ಮತ್ತು ನದಿ ನೀರಿನ ಸಂಗಮ ಪ್ರದೇಶವಿದ್ದು, ಭಾರೀ ಮಳೆಯಿಂದಾಗಿ ಭಾನುವಾರ ಸಂಜೆಯ ವೇಳೆ ನದಿ ಪಾತ್ರವೇ ಬದಲಾಗಿದೆ.
ನದಿ ಪಾತ್ರ ಬದಲಾಗಿ ಹರಿದು ಬಂದು ನೀರು ಲೈಟ್ ಹೌಸ್ನ ಮುಂಭಾಗದಿಂದಲೇ ಸಮುದ್ರವನ್ನು ಸೇರುತ್ತಿರುವುದರಿಂದ ಲೈಟ್ ಹೌಸ್ ಗೆ ತೆರಳುವ ಸಂಪರ್ಕ ಕೊಂಡಿ, ಶೌಚಾಲಯ ಬಳಿಯ ಸಿಮೆಂಟ್ ಸ್ಲಾಬ್, ಪಾತ್ ವೇ, ಲೈಟ್ ಹೌಸ್ ಪ್ರವೇಶದ ಮೆಟ್ಟಿಲುಗಳು ಸಂಪೂರ್ಣ ಕೊಚ್ಚಿ ಹೋಗಿವೆ.
ಕಾಪು, ಪಡು ಗ್ರಾಮ, ಗರಡಿ ಪ್ರದೇಶ, ಸುಬ್ಬಯ್ಯ ತೋಟ, ಬೈರು ಗುತ್ತು ತೋಟ ಸೇರಿದಂತೆ ಎಲ್ಲೆಡೆ ಸಂಗ್ರಹವಾಗಿ, ನದಿಯ ಮೂಲಕ ರಭಸವಾಗಿ ಹರಿದು ಬರುತ್ತಿರುವ ಮಳೆ ನೀರು ಲೈಟ್ ಹೌಸ್ನ ಮುಂಭಾಗದಿಂದಲೇ ಸಮುದ್ರ ಸೇರುತ್ತಿರುವುದರಿಂದ ಕಾಪು ಲೈಟ್ ಹೌಸ್ಗೆ ಹೋಗುವ ಸಂಪರ್ಕ ಕಡಿತಕ್ಕೊಳಗಾಗಿದ್ದು, ಸೋಮವಾರವೂ ಮಳೆ ಮುಂದುವರಿದರೆಮತ್ತಷ್ಟು ಅಪಾಯ ಹೆಚ್ಚುವ ಸಾಧ್ಯತೆಗಳಿವೆ.
ಕಾಪು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವುಡ, ಪುರಸಭಾ ಸದಸ್ಯರು ಮತ್ತು ಲೈಟ್ ಹೌಸ್ ಡಿಪಾರ್ಟ್ಮೆಂಟ್ನ ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಮವಾರ ಮುಂಜಾನೆಯಿಂದಲೇ ಇಲ್ಲಿನ ಹಾನಿಯ ದೃಷ್ಯ ವೀಕ್ಷಣೆಗೆ ಜನ ಆಗಮಿಸಲಾರಂಭಿಸಿದ್ದಾರೆ.