ಮಂಗಳೂರು, ಸೆ 21(Daijiworld News/PY): ಕದ್ರಿ ಪಾರ್ಕ್ ರಸ್ತೆ ಕಾಮಗಾರಿ ವಿಳಂಬ ನೀತಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರಿಂದ ಸೆಪ್ಟೆಂಬರ್ 21ರ ಸೋಮವಾರದಂದು ನಗರದ ಸರ್ಕ್ಯೂಟ್ ಹೌಸ್ ಬಳಿ ಪ್ರತಿಭಟನೆ ನಡೆಯಿತು.




ಈ ವೇಳೆ ಮಾತನಾಡಿದ ಮಾಜಿ ಶಾಸಕ ಜೆ.ಆರ್.ಲೋಬೋ. ಕದ್ರಿ ಪಾರ್ಕ್ ರಸ್ತೆ ಕಾಮಗಾರಿ ಸಂಪೂರ್ಣವಾಗಿ ವಿಫಲವಾಗಿದೆ.ನಗರ ಪ್ರದೇಶದಲ್ಲಿ ಸಾಕಷ್ಟು ಸ್ಮಾರ್ಟ್ ಸಿಟಿ ಹಣ ಪೋಲು ಮಾಡಲಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನ ವಿಚಾರದಲ್ಲಿ ಬಿಜೆಪಿ ಸರ್ಕಾರ ಹಾಗೂ ಸ್ಥಳೀಯ ಶಾಸಕರು ವಿಫಲವಾಗಿದ್ದಾರೆ ಎಂದು ಆರೋಪಿಸಿದರು.
ಕದ್ರಿ ಉದ್ಯಾನವು ಪ್ರವಾಸಿ ತಾಣವಾಗಿದ್ದು. ಇದು ಸಂಚಾರಕ್ಕೆ ಉದ್ದೇಶಿಸದ ರಸ್ತೆಯಾಗಿದೆ. ಈ ರಸ್ತೆಯು ಪ್ರವಾಸೋದ್ಯಮ ತಾಣವಾಗಿರುವುದರಿಂದ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಅವಶ್ಯಕತೆಯಿರುವುದರಿಂದ ಸಂಬಂಧಪಟ್ಟವರು ಈ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಗಮನ ಹರಿಸಬೇಕು. ಇನ್ನು ಉದ್ಯಾನದೊಳಗಿನ ಆಸನದ ವ್ಯವಸ್ಥೆಯು ಉತ್ತಮವಾಗಿಲ್ಲ. ಸಂಗೀತ ಕಾರಂಜಿ ಹಾಗೂ ಆಟಿಕೆಯ ರೈಲು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದೆ. ನಗರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳಲ್ಲಿ ಹೆಚ್ಚಿನ ಹಣವನ್ನು ಖರ್ಚು ಮಾಡಲಾಗಿದೆ ಎಂದಿದ್ದಾರೆ.
ಆಗಿನ ಕಾಂಗ್ರೆಸ್ ಸರ್ಕಾರವು ಕೋಟ್ಯಂತರ ರೂಪಾಯಿ ಮೌಲ್ಯದ ಯೋಜನೆಗಳನ್ನು ಮಂಜೂರು ಮಾಡಿತ್ತು. ಸ್ಥಳೀಯ ಶಾಸಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಬಿಜೆಪಿ ಸರ್ಕಾರ ಎಲ್ಲಾ ಅಭಿವೃದ್ದಿ ಕಾರ್ಯಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಇಲ್ಲದಿದ್ದಲ್ಲಿ ಕಾಂಗ್ರೆಸ್ ನಗರದ ಅಭಿವೃದ್ಧಿ ಕಾರ್ಯ ತಾಣಗಳಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.
ಮಾಜಿ ಮೇಯರ್ ಮಹಾಬಲ ಮಾರ್ಲ ಮಾತನಾಡಿ, ಸ್ಮಾರ್ಟ್ ಯೋಜನೆ ಭ್ರಷ್ಟಚಾರದ ಕೂಪವಾಗಿದೆ. ಇನ್ನು ಸ್ಮಾರ್ಟ್ ಸಿಟಿ ಯೋಜನೆಯನ್ನು ಪ್ಯಾಕೇಜ್ ಮಾಡುವ ಮೂಲಕ ಹಣವನ್ನು ವ್ಯಯ ಮಾಡಲಾಗುತ್ತಿದೆ. ಜೆ.ಆರ್. ಲೋಬೊ ಶಾಸಕರಾಗಿದ್ದಾಗ, ಅಭಿವೃದ್ಧಿ ಕಾರ್ಯಗಳನ್ನು ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿತು.ಈಗ ಅಭಿವೃದ್ದಿ ಕರ್ಯಾಗಳು ನಿಧಾನ ಗತಿಯಲ್ಲಿ ಸಾಗುತ್ತಿವೆ ಎಂದರು.
ಕಾಂಗ್ರೆಸ್ ಮುಖಂಡರಾದ ಟಿ.ಕೆ.ಸುಧೀರ್, ಸಲೀಂ, ಸೇರಿದಂತೆ ಮತ್ತಿತರು ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.