ಮಂಗಳೂರು, ಸೆ. 21 (DaijiworldNews/SM): ಕರಾವಳಿಯ ಪ್ರಸಿದ್ಧ ಕ್ಷೇತ್ರಗಳಲ್ಲೊಂದಾಗಿರುವ ಕಟೀಲು ಶ್ರೀ ದುರ್ಗಾಪರಮೇಶ್ವರ ಕ್ಷೇತ್ರ ಸೀಲ್ ಡೌನ್ ಎನ್ನುವ ಸುದ್ದಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅದು ಸುಳ್ಳು ಸುದ್ದಿ ಭಕ್ತರು ಗೊಂದಲಕ್ಕೀಡಾಗುವುದು ಬೇಡ ಎಂದು ಕ್ಷೇತ್ರದ ಆಡಳಿತ ಮಂಡಳಿ ದೈಜಿವರ್ಲ್ಡ್ ಗೆ ತಿಳಿಸಿದೆ.

ಸೆಪ್ಟೆಂಬರ್ 21ರ ಸೋಮವಾರ ಮಧ್ಯಾಹ್ನದ ವೇಳೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕಟೀಲು ಕ್ಷೇತ್ರ ಸೀಲ್ ಡೌನ್ ಎನ್ನುವ ಸುದ್ದಿ ವೈರಲ್ ಆಗಲಾರಂಭಿಸಿದೆ. ಇದರಿಂದಾಗಿ ಭಕ್ತರು ಗೊಂದಲಕ್ಕೀಡಾಗಿದ್ದರು. ಆದರೆ, ಇಂತಹ ಯಾವುದೇ ಸನ್ನಿವೇಶ ಇಲ್ಲ ಎಂಬುವುದು ಇದೀಗ ಸ್ಪಷ್ಟಗೊಂಡಿದೆ.
ಇನ್ನು ಒಂದು ವಾರದ ಹಿಂದೆ ದೇಗುಲದ ಅರ್ಚಕರೊಬ್ಬರಲ್ಲಿ ಕೊರೋನಾ ಸೋಂಕು ದೃಢಪಟ್ಟಿತ್ತು. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಗುಣಮುಖರಾಗಿದ್ದಾರೆ. ಈ ಹಿನ್ನಲೆ ಸರ್ಕಾರದ ವತಿಯಿಂದ ರ್ಯಾಂಡಮ್ ಟೆಸ್ಟ್ ನಡೆಸಲಾಗಿತ್ತು. ದೇಗುಲದ ಒಟ್ಟು ೧೫೦ ಮಂದಿ ರ್ಯಾಂಡಮ್ ಟೆಸ್ಟ್ ನಲ್ಲಿ ಭಾಗಿಯಾಗಿದ್ದರು. ಆದರೆ, ಈ ಪೈಕಿ ೧೭ ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿತ್ತು. ಪಾಸಿಟಿವ್ ಪತ್ತೆಯಾದವರಲ್ಲಿ ಯಾವುದೇ ರೋಗಲಕ್ಷಣಗಳಿಲ್ಲದ ಕಾರಣ ಎಲ್ಲರೂ ಹೋಂ ಐಸೋಲೇಷನ್ನಲ್ಲಿದ್ದಾರೆ.
ಇನ್ನು ಎಂದಿನಂತೆ ದೇಗುಲ ತೆರೆದಿದೆ. ಪೂಜೆಗಳು ಕೂಡಾ ನಡೆಯುತ್ತಿದೆ. ಭಕ್ತರಿಗೆ ದೇಗುಲಕ್ಕೆ ಭೇಟಿ ನೀಡಲು ಅವಕಾಶ ಇರಲಿದೆ. ಯಾರೂ ಕೂಡ ಸುಳ್ಳು ಸುದ್ದಿಗಳಿಗೆ ಕಿವಿಗೊಡದಂತೆ ಆಡಳಿತ ಮಂಡಳಿ ಮನವಿ ಮಾಡಿಕೊಂಡಿದೆ.